ಹೊಸದಿಗಂತ ವರದಿ ಹಾಸನ :
ಜಿಲ್ಲೆಯಾದ್ಯಂತ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಆರ್. ಪೂರ್ಣಿಮಾ ಕರೆ ನೀಡಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅ.೩೧ ರವರೆಗೆ “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ” ಅಭಿಯಾನ ಹಮ್ಮಿಕೊಳ್ಳಲಾಗಿದೆ. ನರೇಗಾ ಯೋಜನೆಯ ೨೦೨೪-೨೫ ನೇ ಸಾಲಿನ ಆರ್ಥಿಕ ವರ್ಷದ ಆಯವ್ಯಯ ತಯಾರಿಸಲು ವೇಳಾಪಟ್ಟಿ ನಿಗದಿಪಡಿಸಿ, ಕಾಲಮಿತಿಯೊಳಗೆ ಕಾರ್ಮಿಕರ ಆಯವ್ಯಯವನ್ನು ಸಲ್ಲಿಸಲು ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಸೂಚಿಸಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಗ್ರಾ. ಪಂ ನಲ್ಲಿ ಅ. ೦೨ ರಿಂದ ೩೧ರ ವರೆಗೂ ವಿಶೇಷ ಐಐಸಿ ಕಾರ್ಯಕ್ರಮಗಳಾದ ಮನೆ ಮನೆ ಜಾಥಾ, ರೋಜ್ಗಾರ್ ದಿವಸ್ ಗಳು, ಕರಪತ್ರ ಹಂಚಿಕೆ ಮೊದಲಾದ ಕಾರ್ಯಕ್ರಮಗಳ ಮೂಲಕ “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ” ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಗ್ರಾ. ಪಂ ಸಿಬ್ಬಂದಿಗಳು ಗ್ರಾ. ಪಂ ವ್ಯಾಪ್ತಿಯ ಪ್ರತಿಯೊಂದು ಮನೆಗೆ ಭೇಟಿ ನೀಡಿ ನರೇಗಾ ಕುರಿತು ಮಾಹಿತಿ ನೀಡಲಿದ್ದಾರೆ. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮಸ್ತರಿಗೆ ಯೋಜನೆಯಡಿ ಸಿಗುವ ಸೌಲಭ್ಯ ಹಾಗೂ ಜಲ ಸಂಜೀವಿನಿ ಕಾರ್ಯಕ್ರಮದ ಮಹತ್ವದ ಬಗ್ಗೆ ಪ್ರಚಾರ ನಡೆಸಿ, ಕೆಲಸ ಮತ್ತು ಕಾಮಗಾರಿಗಳ ಬೇಡಿಕೆಯನ್ನು ಸಂಗ್ರಹಿಸಲಿದ್ದಾರೆ.
ಸರ್ಕಾರ ಮತ್ತು ಇಲಾಖೆಯ ನಿಯಮ ಹಾಗೂ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ ಮತ್ತು ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಿ, ಜನರ ಸಹಭಾಗಿತ್ವದೊಂದಿಗೆ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿದ್ದು, ಗ್ರಾಮವಾಸಿಗಳು ಈ ಅಭಿಯಾನದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಬೇಡಿಕೆ ಪೆಟ್ಟಿಗೆ ಇಡಲಾಗುತ್ತಿದ್ದು, ಸಾರ್ವಜನಿಕರಿಂದ ಅ.೩೧ ರವರೆಗೆ ಬೇಡಿಕೆ ಸ್ವೀಕರಿಸಲಾಗುತ್ತದೆ. ಸಾರ್ವಜನಿಕರಿಂದ ಬಂದ ಕಾಮಗಾರಿ ಬೇಡಿಕೆ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಸದರಿ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸುವ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳಲ್ಲಿ ಅನುಮೋದಿಸಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಕ್ರಮ ವಹಿಸಲಾಗುವುದು.
ನಿಮ್ಮ ಕೃಷಿ ಜಮೀನಿನಲ್ಲಿ ತೋಟಗಾರಿಕೆ, ರೇಷ್ಮೆ ಬೆಳೆ ಮತ್ತು ಕೃಷಿ ಅರಣ್ಯ ಪ್ರದೇಶ ವಿಸ್ತರಿಸಿಕೊಳ್ಳಲು, ಮಣ್ಣಿನ ಸವಕಳಿ ತಡೆದು ಮಳೆ ನೀರನ್ನು ಸಂರಕ್ಷಿಸಲು ಕಂದಕ ಬದು, ಕೃಷಿ ಹೊಂಡ ನಿರ್ಮಿಸಿಕೊಳ್ಳಲು, ಜಾನುವಾರುಗಳಿಗೆ ಶೆಡ್ ಕಟ್ಟಿಸಿಕೊಳ್ಳಲು, ಮನೆ ಬಳಕೆಯ ತ್ಯಾಜ್ಯ ನೀರನ್ನು ಇಂಗಿಸಲು ಬಚ್ಚಲು ಗುಂಡಿ ನಿರ್ಮಿಸಿಕೊಳ್ಳಲು ಗ್ರಾಮ ಸಭೆ ಅನುಮೋದನೆ ಕಡ್ಡಾಯವಾಗಿದೆ.
ಉದ್ಯೋಗ ಚೀಟಿ ಹೊಂದಿದ ಎಲ್ಲಾ ಆಸಕ್ತ ಕುಟುಂಬಗಳು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಬೇಡಿಕೆಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ನೋಂದಾಯಿತ ಪ್ರತಿ ಕುಟುಂಬಕ್ಕೆ ಜೀವಿತಾವಧಿಯಲ್ಲಿ ರೂ. ೨.೫೦ ಲಕ್ಷದವರೆಗೆ ಆರ್ಥಿಕ ನೆರವು ಪಡೆಯಲು ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ