ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38 ವರ್ಷದ ವ್ಯಕ್ತಿಗೆ ಎಂಪಾಕ್ಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಇದು ಭಾರತದ ಎರಡನೇ ದೃಡಪಡಿಸಿದ ಮಂಕಿಪಾಕ್ಸ್ ಪ್ರಕರಣವಾಗಿದೆ.
ಈಗಾಗಲೇ ವೈದ್ಯಕೀಯ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಮಲಪ್ಪುರಂನ 38 ವರ್ಷದ ವ್ಯಕ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹಿಂದಿರುಗಿದ ನಂತರ ಎಂಪಾಕ್ಸ್ ಪಾಸಿಟಿವ್ ಆಗಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಮಾಹಿತಿ ನೀಡಿದ್ದು, ವೀಣಾ ಜಾರ್ಜ್ ಸಾರ್ವಜನಿಕರಿಗೆ ತಿಳಿದಿರುವ ಯಾವುದೇ ರೋಗಲಕ್ಷಣಗಳನ್ನು ಪ್ರದರ್ಶಿಸಿದರೆ ಚಿಕಿತ್ಸೆ ಪಡೆಯಲು ಮತ್ತು ಆರೋಗ್ಯ ಇಲಾಖೆಗೆ ತಿಳಿಸುವಂತೆ ಒತ್ತಾಯಿಸಿದ್ದಾರೆ.
Mpox ರೋಗಿಯನ್ನು ಪ್ರತ್ಯೇಕವಾಗು ಇರಿಸಲಾಗಿತ್ತು. ವೈದ್ಯಕೀಯ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದರು.
ವಿದೇಶದಿಂದ ಮರಳಿದ ವ್ಯಕ್ತಿಗೆ ರೋಗದ ಲಕ್ಷಣಗಳು ಕಂಡುಬಂದಿದ್ದವು. ಅಸ್ವಸ್ಥಗೊಂಡ ನಂತರ ಅವರನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಮಂಜೇರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ನಂತರ ಅವರ ಮಾದರಿಗಳನ್ನು ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿತ್ತು.
ಒಂಬತ್ತು ದಿನಗಳ ಹಿಂದೆ ಭಾರತ ತನ್ನ ಮೊದಲ ಪ್ರಕರಣವನ್ನು ವರದಿ ಮಾಡಿತ್ತು. ಪಶ್ಚಿಮ ಆಫ್ರಿಕಾದಿಂದ ಪ್ರಯಾಣಿಸಿದ ಯುವಕನಿಗೆ ದೆಹಲಿಯಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಅವರ ಆರೋಗ್ಯ ಸ್ಥಿರವಾಗಿದ್ದು, ವೈರಸ್ ಹರಡುವುದನ್ನು ತಡೆಯಲು ಪ್ರತ್ಯೇಕಿಸಲಾಗಿದೆ.