ಹೊಸದಿಗಂತ ವರದಿ,ಮಂಗಳೂರು;
ಬಂಟ್ವಾಳ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಮನೆಯೊಂದರಲ್ಲಿ ಯಾರೂ ಇಲ್ಲದ ಸಂದರ್ಭ ಕಳ್ಳರು ಹಾಡುಹಗಲು ಹಿಂಬಾಗಿಲು ಮುರಿದು 36 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ.
ಬಂಟ್ವಾಳ ವಿಟ್ಲಪಡ್ನೂರು ಗ್ರಾಮದ ಕುಂಟುಕುಡೇಲು ಲೀಲಾ ಕೆ (55) ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರು ಕೊಡಂಗಾಯಿಗೆ ತೆರಳಿದ್ದ ಸಂದರ್ಭವನ್ನು ಗಮನಿಸಿಕೊಂಡು ಕಳ್ಳತನ ನಡೆಸಲಾಗಿದೆ.
ಕೊಡಂಗಾಯಿಗೆ ತೆರಳಿದವರು ಮನೆಗೆ ಹಿಂತಿರುಗಿದಾಗ, ಮನೆಯ ಹಿಂಭಾಗದ ಬಾಗಿಲನ್ನು ಯಾರೋ ಕಳ್ಳರೂ ಯಾವುದೋ ಆಯುಧದಿಂದ ಮುರಿದು ಒಳಪ್ರವೇಶಿಸಿರುವುದು ಕಂಡುಬಂದಿದೆ. ಮನೆಯಲ್ಲಿ ಪರಿಶೀಲಿಸಿದಾಗ, ಮನೆಯ ಕೋಣೆಯ ಕಪಾಟಿನ ಒಳಗಡೆ ಇದ್ದ 1.46ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದು ಕಂಡುಬಂದಿದೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಈಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಂದು ಹೋದವರ ಮಾಹಿತಿ ಸಂಗ್ರಹ ಮಾಡುವ ಕಾರ್ಯವನ್ನು ಪ್ರಾಥಮಿಕವಾಗಿ ಮಾಡಲಾಗುತ್ತಿದೆ.
ಈ ಹಿಂದೆಯೂ ವಿಟ್ಲ ಭಾಗದಲ್ಲಿ ಹಿಂದಿ ಬಾಗಿಲು ಒಡೆದು ಕಳ್ಳತನ ಪ್ರಕರಣಗಳು ನಡೆದಿದ್ದು, ನುರಿತ ಎರಡು ಮೂರು ಮಂದಿ ಕಳ್ಳರಿಂದ ಕೃತ್ಯ ನಡೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.