ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಮಾವೋವಾದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿರುವ ಘಟನೆ ಶನಿವಾರ ನಡೆದಿದೆ.
ಮೃತನನ್ನು ಐಪಿಲ್ ಮುರ್ಮು ಅಲಿಯಾಸ್ ರೋಹಿತ್ ಮುರ್ಮು ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ ರೋಹಿತ್ ಮುರ್ಮು ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ರೈಲ್ವೆ ಹಳಿ ಸ್ಫೋಟದ ಪ್ರಮುಖ ಆರೋಪಿಗಳಲ್ಲಿ ಒಬ್ಬ. ಅಲ್ಲದೆ ಕಳೆದ ವರ್ಷ ಜಾರ್ಖಂಡ್‌ನಲ್ಲಿ ನಡೆದ ಇದೇ ರೀತಿಯ ಸ್ಫೋಟ ಪ್ರಕರಣದಲ್ಲಿಯೂ ಭಾಗಿಯಾಗಿದ್ದ.
ಆತನನ್ನು ಬಂಧಿಸಲು ಜಾರ್ಖಂಡ್ ಪೊಲೀಸ್ ತಂಡ ಇತ್ತೀಚೆಗೆ ಅಸ್ಸಾಂಗೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯ ಬಳಿಕ ಪೊಲೀಸರು ಎನ್‌ಕೌಂಟರ್ ನಡೆದ ಸ್ಥಳದಿಂದ 1 ಪಿಸ್ತೂಲ್, ಗ್ರೆನೇಡ್, ಮತದಾರರ ಗುರುತಿನ ಚೀಟಿ ಮತ್ತು ಜಾರ್ಖಂಡ್‌ನಲ್ಲಿ ನೀಡಲಾದ ಆಧಾರ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ.
ಎನ್‌ಕೌಂಟರ್ ಬಗ್ಗೆ ಮಾಹಿತಿ ನೀಡಿದ ಎಸ್‌ಎಸ್‌ಪಿ ಪುಷ್ಪರಾಜ್ ಸಿಂಗ್, ಕಳೆದ ವರ್ಷ ಜಾರ್ಖಂಡ್‌ನಲ್ಲಿ ಸ್ಫೋಟ ನಡೆಸಿದ ನಂತರ ಮುರ್ಮು ಅಸ್ಸಾಂಗೆ ಪರಾರಿಯಾಗಿದ್ದʼʼ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಮುರ್ಮು ರಾಷ್ಟ್ರೀಯ ಸಂತಲ್ ಲಿಬರೇಶನ್ ಆರ್ಮಿ ಜತೆ ಸಂಬಂಧ ಹೊಂದಿದ್ದ. ಈ ಸಂಘಟನೆಯು ಮಾವೋವಾದಿ ಗುಂಪಿನೊಂದಿಗೆ ಗುರುತಿಸಿಕೊಂಡಿದೆ. ಈ ಹಿಂದೆ ಎನ್‌ಎಸ್‌ಎಲ್‌ಎ ಸದಸ್ಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದಾಗ, ಮುರ್ಮು ಶರಣಾಗಲು ನಿರಾಕರಿಸಿದ್ದ ಮತ್ತು ಜಾರ್ಖಂಡ್‌ಗೆ ಪರಾರಿಯಾಗಿದ್ದ. ಅಲ್ಲಿ ಪ್ರತ್ಯೇಕ ಬಣವನ್ನು ರಚಿಸಿ ಅದರ ಕಮಾಂಡರ್ ಕೂಡ ಆಗಿದ್ದ. ನಂತರ ಆತ ಮಾವೋವಾದಿ ಗುಂಪುಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸಿ ತನ್ನ ಜಾಲವನ್ನು ವಿಸ್ತರಿಸಿದ. 2015ರಿಂದ ಜಾರ್ಖಂಡ್‌ನಲ್ಲಿ ನಡೆದ ಹಲವು ವಿಧ್ವಂಸಕ ಚಟುವಟಿಕೆಗಳಲ್ಲಿ ಈತನ ಕೈವಾಡವಿದೆ.

