ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಗಾಂಗೀರ್, ಗಂದೇರ್ಬಾಲ್ ಪ್ರದೇಶಗಳಲ್ಲಿ ನಡೆದ ಭೀಕರ ದಾಳಿಯಲ್ಲಿ ನೇರ ಭಾಗಿಯಾಗಿದ್ದು, ಹಲವು ನಾಗರಿಕ ಹತ್ಯೆಗಳಿಗೆ ಕಾರಣನಾಗಿದ್ದ ಉಗ್ರ ಜುನೈದ್ ಅಹ್ಮದ್ ಭಟ್ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಈ ಕುರಿತು ಕಾಶ್ಮೀರ ಪೊಲೀಸರು ಹೇಳಿಕೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದ ದಚಿಗ್ರಾಮ್ ಪ್ರದೇಶದಲ್ಲಿ ಮಂಗಳವಾರ (ಡಿ. 3) ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಗೆ ಸೇರಿದ ಈತನನ್ನು ಹತ್ಯೆ ಮಾಡಲಾಗಿದೆ. ಈತ ಗಗಾಂಗೀರ್, ಗಂದೇರ್ಬಾಲ್ ಮತ್ತು ಇತರ ಭಯೋತ್ಪಾದಕ ದಾಳಿಗಳಲ್ಲಿ ಹಾಗೂ ಭೀಕರ ನಾಗರಿಕ ಹತ್ಯೆಗಳಲ್ಲಿ ಅವನು ನೇರ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಜಂಟಿ ತಂಡವು ಈ ಪ್ರದೇಶದಲ್ಲಿ ಸ್ಥಳೀಯರಲ್ಲದ ಗುಂಪಿನ ಚಲನವಲನೆ ಸೂಚಿಸುವ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಸುದೀರ್ಘ ಶೋಧ ಕಾರ್ಯಾಚರಣೆಯ ನಂತರ ದಾಚಿಗ್ರಾಮ್‌ನಲ್ಲಿ ಎನ್‌ಕೌಂಟರ್ ನಡೆದಿತ್ತು.
ಶೋಧ ಕಾರ್ಯಾಚರಣೆ ಮುಂದುವರಿದಂತೆ ಇಬ್ಬರು ಭಯೋತ್ಪಾದಕರು ಈ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಕಾಶ್ಮೀರ ಕಣಿವೆಯಲ್ಲಿನ ಭದ್ರತಾ ಸಂಬಂಧಿತ ಘಟನೆಗಳ ಸರಣಿಯ ನಡುವೆ ಇತ್ತೀಚೆಗೆ ನಡೆದ ಎನ್‌ಕೌಂಟರ್ ಇದಾಗಿದೆ.