ಕಣ್ಣಿಗೆ ಕಾಣದ ಇನ್‌ಫ್ರಾರೆಡ್ ಕಿರಣಗಳಿಂದಲೂ ಶಕ್ತಿ ಉತ್ಪಾದನೆ- ಇದು ಬೆಂಗಳೂರಿನ ವಿಜ್ಞಾನಿಗಳ ಸಾಧನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅತಿಕೆಂಪು ಬೆಳಕು (ಇನ್‌ಫ್ರಾರೆಡ್)‌ಅನ್ನು ಪತ್ತೆಹಚ್ಚುವ ಜೊತೆಗೆ ಅದನ್ನು ಬಳಸಿಕೊಂಡು ಶಕ್ತಿಯ ಉತ್ಪಾದನೆ ಮಾಡಬಲ್ಲ ಹೊಸ ಸಾಧನವೊಂದನ್ನು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್)ನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು ಬರಿಗಣ್ಣಿಗೆ ಗೋಚರಿಸದ ಅತಿಗೆಂಪು ಬೆಳಕನ್ನು ಪತ್ತೆಹಚ್ಚಬಲ್ಲುದು.

ಇತ್ತೀಚೆಗೆ ನಡೆದ ಈ ಸಂಶೋಧನೆಯಲ್ಲಿ ಸಿಂಗಲ್‌ ಕ್ರಿಸ್ಟಿಲೀನ್‌ ಸ್ಕ್ಯಾಂಡಿಯಂ ನೈಟ್ರೈಡ್ ಎಂಬ ಸಾಧನವೊಂದನ್ನು ಅವರು ಕಂಡು ಹಿಡಿದಿದ್ದು ಇದು ಇನ್‌ಫ್ರಾರೆಡ್‌ ಬೆಳಕನ್ನು ಕಂಡುಹಿಡಿದು ಅದನ್ನು ಅಗತ್ಯಕ್ಕೆ ತಕ್ಕಂತೆ ಮಾಡ್ಯುಲೇಟ್‌ (ಪರಿವರ್ತನೆ) ಮಾಡಬಲ್ಲುದು. ಇದು ಸೌರ ಶಕ್ತಿ, ಉಷ್ಣಶಕ್ತಿ ಹಾಗೂ ಆಪ್ಟಿಕಲ್‌ ಉತ್ಪನ್ನಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ.

ಸಾಮಾನ್ಯವಾಗಿ ವಿದ್ಯುತ್‌ ಕಾಂತೀಯ ಅಲೆಗಳನ್ನು ಶಕ್ತಿಯ ಮೂಲಗಳಾಗಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ಸಿಂಗಲ್‌ ಕ್ರಿಸ್ಟಿಲೀನ್‌ ಸ್ಕ್ಯಾಂಡಿಯಂ ನೈಟ್ರೈಡ್ ಅನ್ನು ಬಳಸಿ ಅತಿಗೆಂಪು ಕಿರಣಗಳಿಂದ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸಬಹುದಾಗಿದೆ. ಇದು ವಿದ್ಯುತ್ ಉತ್ಪಾದನೆ, ದೂರಸಂಪರ್ಕ, ರಕ್ಷಣಾ ಮತ್ತು ಭದ್ರತಾ ತಂತ್ರಜ್ಞಾನಗಳು, ಸಂವೇದಕಗಳು ಮತ್ತು ಆರೋಗ್ಯ ಸೇವೆಗಳಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಲಿದೆ. ಬೆಳಕಿನ ಎಲ್ಲಾ ತರಂಗಗಳನ್ನು ಬಳಸುವುದು ಸುಲಭವಲ್ಲ ಆದರೆ ಬೆಂಗಳೂರಿನ ವಿಜ್ಞಾನಿಗಳು ಉನ್ನತ ತಂತ್ರಜ್ಞಾನ ಬಳಸಿ ಅದನ್ನು ಸಾಧಿಸಿ ತೋರಿಸಿದ್ದಾರೆ.

ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್)ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ವಿಜ್ಞಾನಿ K. C. ಮೌರ್ಯ ಮತ್ತು ಇತರರು ಸೇರಿ ಈ ಹೊಸ ಆವಿಷ್ಕಾರವನ್ನು ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!