ಬುಮ್ರಾ ಮಿಂಚಿನ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಸ್‌ಪ್ರೀತ್‌ ಬುಮ್ರಾ ಮಿಂಚಿನ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 110 ರನ್‌ಗೆ ಆಲೌಟ್‌ ಆಯಿತು.
ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಬುಮ್ರಾ ಅವರ ಉರಿವೇಗದ ದಾಳಿಯ ಮುಂದೆ ಕೇವಲ 26 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ತಂಡ ಕೆಳ ಹಂತದಲ್ಲಿ ಬಾಲಂಗೋಚಿಗಳ ಸಹಾಯದಿಂದ 25.2 ಓವರ್‌ಗಳಲ್ಲಿ 110 ರನ್‌ ಪೇರಿಸಲು ಯಶಸ್ವಿಯಾಯಿತು.
ಇಂಗ್ಲೆಂಡ್‌ ತಂಡದ ಈ ಮೊತ್ತ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಈವರೆಗಿನ ಅತ್ಯಂತ ಕನಿಷ್ಠ ಮೊತ್ತ ಎನಿಸಿದೆ. ಇದಕ್ಕೂ ಮುನ್ನ 2006ರಲ್ಲಿ ಜೈಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ 125 ರನ್‌ಗೆ ಅಲೌಟ್‌ ಆಗಿದ್ದು ಅತ್ಯಂತ ಕನಿಷ್ಠ ಮೊತ್ತ ಎನಿಸಿತ್ತು.
ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಆರಂಭದಿಂದಲೇ ಭಾರತ ಒತ್ತಡ ಹೇರಿತು. 5 ಎಸೆತ ಎದುರಿಸಿದ ಜೇಸನ್‌ ರಾಯ್‌ ಇನ್ನಿಂಗ್ಸ್‌ 2ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬುಮ್ರಾಗೆ ಮೊದಲ ಬಲಿಯಾದರೆ, ಅದೇ ಓವರ್‌ನ ಕೊನೇ ಎಸೆತದಲ್ಲಿ ಜೋ ರೂಟ್‌ ವಿಕೆಟ್ ಉರುಳಿಸಿದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದ ಕಾರಣ ಇಂಗ್ಲೆಂಡ್‌ ತಂಡ 6 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಮೊತ್ತಕ್ಕೆ 1 ರನ್‌ ಸೇರಿಸುವ ವೇಳೆಗೆ ಮೊಹಮದ್‌ ಶಮಿ , ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ವಿಕೆಟ್‌ ಅನ್ನು ಉರುಳಿಸಿದರು. ಬಳಿಕ ಜಾನಿ ಬೇರ್‌ ಸ್ಟೋ ಹಾಗೂ ವಿಕೆಟ್‌ ಕೀಪರ್‌-ಕ್ಯಾಪ್ಟನ್‌ ಜೋಸ್‌ ಬಟ್ಲರ್‌ ತಂಡದ ಮೊತ್ತವನ್ನು ಎರಡಂಕಿ ಮೊತ್ತಕ್ಕೆ ಏರಿಸಿದರು.
6ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಬುಮ್ರಾ, ಬೇರ್‌ಸ್ಟೋ ವಿಕೆಟ್‌ ಅನ್ನು ಉರುಳಿಸಿದರೆ. ಲಿಯಾಮ್‌ ಲಿವಿಂಗ್‌ಸ್ಟೋನ್‌ 8 ಎಸೆತಗಳನ್ನು ಎದುರಿಸಿ ಬುಮ್ರಾ ಎಸೆತದಲ್ಲಿ ಶೂನ್ಯಕ್ಕೆ ಔಟಾದರು.
ಬಟ್ಲರ್ ಹಾಗೂ ಮೊಯಿನ್‌ ಅಲಿ 6ನೇ ವಿಕೆಟ್‌ಗೆ 28 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. 18 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 14 ರನ್‌ ಬಾರಿಸಿದ್ದ ಮೊಯಿನ್‌ ಅಲಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್‌ ಒಪ್ಪಿಸಿದರೆ, ಈ ಮೊತ್ತ್ಕೆ 6 ರನ್‌ ಸೇರಿಸುವ ವೇಳಗೆ ನಾಯಕ ಬಟ್ಲರ್‌, ಮೊಹಮದ್‌ ಶಮಿ ಎಸೆತದಲ್ಲಿ ಸೂರ್ಯಕುಮಾರ್‌ ಯಾದವ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.
ಬಳಿಕ ಕ್ರೇಗ್‌ ಓವರ್ಟನ್‌ ವಿಕೆಟ್‌ ಉರುಳಿಸುವ ಮೂಲಕ ಶಮಿ 3 ವಿಕೆಟ್‌ ಸಾಧನೆ ಮಾಡಿದರೆ, ಕೊನೆಯಲ್ಲಿ ಡೇವಿಡ್‌ ವಿಲ್ಲಿ (21) ಹಾಗೂ ಬ್ರಾಡಾನ್‌ ಕಾರ್ಸೆ (15) ಕೆಲ ಶಾಟ್‌ ಗಳನ್ನು ಬಾರಿಸಿದ್ದರಿಂದ ಇಂಗ್ಲೆಂಡ್‌ ತಂಡ 100ರ ಗಡಿ ದಾಟಿಸುವಲ್ಲಿ ಯಶ ಕಂಡಿತು. ಈ ಎರಡೂ ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದ ಜಸ್‌ಪ್ರೀತ್‌ ಬುಮ್ರಾ 6 ವಿಕೆಟ್‌ ಸಾಧನೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!