ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಎಡವಿದ ಇಂಗ್ಲೆಂಡ್: ಸರಣಿ ಗೆದ್ದ ರೋಹಿತ್ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ನಿರ್ವಹಣೆ ನೀಡಿದ ಭಾರತವು ಇಂಗ್ಲೆಂಡನ್ನು‌ ಎರಡನೇ ಟಿ20 ಪಂದ್ಯದಲ್ಲೂ 49 ರನ್ ಗಳಿಂದ ಸೋಲಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು.
ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಆರಂಭದಲ್ಲಿ ತೋರಿದ ಆಕ್ರಮಣಕಾರಿ ಆಟದಿಂದ ಹಾಗೂ ಅಂತ್ಯದಲ್ಲಿ ರವೀಂದ್ರ ಜಡೇಜಾ ಪ್ರದರ್ಶಿಸಿದ ಹೊಡೆತಗಳ ನೆರವಿನಿಂದ ಭಾರತವು ಎಂಟು ವಿಕೆಟಿಗೆ 170 ರನ್ ಗಳನ್ನು ಗಳಿಸಿತಲ್ಲದೆ ಬಳಿಕ ಇಂಗ್ಲೆಂಡ್ ನ್ನು 121 ರನ್ ಗಳಿಗೆ ನಿಯಂತ್ರಿಸಿತು. ಭಾರತೀಯ ಬೌಲರುಗಳು ಅತ್ಯತ್ತಮ ನಿರ್ವಹಣೆ ನೀಡಿ 17 ಓವರುಗಳಲ್ಲೆ ಇಂಗ್ಲೆಂಡನ್ನು ಆಲೌಟ್ ಮಾಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್ ಜತೆಗೆ ರಿಷಬ್ ಪಂತ್ ಆರಂಭಿಕರಾಗಿ ಬಂದರು. ಇವರಿಬ್ಬರು ಮೊದಲ ವಿಕೆಟಿಗೆ 5 ಓವರುಗಳಲ್ಲೆ 50 ರನ್ ಸೇರಿಸಿದರು. ರೋಹಿತ್ 20 ಎಸೆತಗಳಿಂದ 31ರನ್ ಮಾಡಿದರೆ, ಪಂತ್ 15 ಎಸೆತಗಳಿಂದ 26 ರನ್ ಗಳಿಸಿದರು.
ಈ ಹಂತದಲ್ಲಿ ಚೊಚ್ಚಲ ಪಂದ್ಯವಾಡುತ್ತಿರುವ ರಿಚರ್ಡ್ ಗ್ಲೀಸನ್ ಮೂರು ವಿಕೆಟ್ ಕೀಳುವ ಮೂಲಕ ಭಾರತಕ್ಕೆ ಆಘಾತ ನೀಡಿದರು. ವಿರಾಟ್ ಕೊಹ್ಲಿ ಮತ್ತೊಮ್ಮೆ ದಯನೀಯ ಪ್ರದರ್ಶನ ನೀಡಿ ಕೇವಲ ಒಂದು ರನ್ ಗಳಿಸಿ ಔಟಾದರು.
ಹಾರ್ದಿಕ್ ಪಾಂಡ್ಯಾ (12) ಮತ್ತು ಸೂರ್ಯಕುಮಾರ್ (15) ತುಸು ಹೊತ್ತು ತಂಡವನ್ನು ಆಧರಿಸಿದರಾದರೂ ಅದು ಹೆಚ್ಚು ಕಾಲ ಬಾಳಲಿಲ್ಲ. ಭಾರತವು ಮಧ್ಯಮ ಸರದಿಯಲ್ಲಿ ಮತ್ತೆ ಕುಸಿತ ಕಂಡಿತು. ಫಿನಿಶರ್ ದಿನೇಶ್ ಕಾರ್ತಿಕ್ (12) ಕೂಡ ಹೆಚ್ಚು ರನ್ ಗಳಿಸದಾದರು
ಆದರೆ ಅಲ್ ರೌಂಡರ್ ರವೀಂದ್ರ ಜಡೇಜಾ ಮತ್ತೆ ಭಾರತದ ನೆರವಿಗೆ ಬಂದರು. 22 ಎಸೆತಗಳಿಂದ ಅಜೇಯ 35 ರನ್ ಗಳಿಸಿದ ಅವರು ಭಾರತವು ಸವಾಲೊಡ್ಡುವ ಮೊತ್ತ ಪೇರಿಸಲು ಸಹಕಾರಿಯಾದರು.
ಇಂಗ್ಲೆಂಡ್ ಪರವಾಗಿ ಗ್ಲೀಸನ್ 15 ರನ್ ಗೆ ಮೂರು ವಿಕೆಟ್ ಪಡೆದರೆ, ಜೋರ್ಡಾನ್ 27 ರನ್ ಗೆ ನಾಲ್ಕು ವಿಕೆಟ್ ಗಳಿಸಿದರು.
ಇಂಗ್ಲೆಂಡಿನ ಚೇಸಿಂಗಿಗೆ ಭಾರತ ಆರಂಭದಲ್ಲೆ ಹೊಡೆತ ನೀಡಿತು. ಮೊತ್ತ ಮೊದಲ‌ ಎಸೆತದಲ್ಲೆ ಭುವನೇಶ್ವರ್ ಜೇಸನ್ ರಾಯ್ ವಿಕೆಟ್ ಪಡೆದರು. ಅಲ್ಲಿಂದ ಬಳಿಕ‌ ಅವರ ಹಾಗೂ ಬೂಮ್ರಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ನಿಗದಿತ ಅಂತರದಲ್ಲಿ ವಿಕೆಟ್ ಕಳಕೊಳ್ಳುತ್ತಾ ಸಾಗಿತು. ಮೊಯಿನ್ ಆಲಿ 35 ರನ್ ಗಳಿಸಿದರು. ಅಂತ್ಯದಲ್ಲಿ ಡೇವಿಡ್ ವಿಲ್ಲಿ 22 ಎಸೆತಗಳಿಂದ 33 ರನ್ ಮಾಡಿ ತುಸು ಹೋರಾಟದ ಕೆಚ್ಚು ತೋರಿಸಿದರು.
ಭುವನೇಶ್ವರ್ ಮೂರು ವಿಕೆಟ್ ಗಳಿಸಿದರು. ಚಾಹಲ್ ಮತ್ತು ಬೂಮ್ರಾ ತಲಾ ಎರಡು ವಿಕೆಟ್ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!