ENG VS NZ | ಲಾರ್ಡ್‌ ನಲ್ಲಿ ವೇಗಿಗಳ ಮೆರೆದಾಟ: ಒಂದೇ ದಿನ 17 ವಿಕೆಟ್‌ ಗಳ ಪತನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐತಿಹಾಸಿಕ ಲಾರ್ಡ್ಸ್‌ ಕ್ರೀಡಾಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ vs ನ್ಯೂಜಿಲೆಂಡ್ ಮೊದಲ ಟೆಸ್ಟ್‌ನ ಮೊದಲ ದಿನ ವೇಗಿಗಳು ಮೆರೆದಾಡಿದರು. ಪ್ರತಿಫಲವಾಗಿ ಒಂದೇ ದಿನ ಬರೋಬ್ಬರಿ 17 ವಿಕೆಟ್‌ ಗಳು ಪತನಗೊಂಡವು.
ಟಾಸ್‌ ಗೆದ್ದ ನ್ಯೂಜಿಲ್ಯಾಂಡ್‌ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ವೇಗಿಗಳಿಗೆ ನೆರವು ಸಿಗುತ್ತಿದ್ದ ಪಿಚ್‌ ನಲ್ಲಿ ಬ್ಯಾಟಿಂಗ್‌ ನಡೆಸಲು ತಡಬಡಾಯಿಸಿದ ಕಿವೀಸ್‌ ದಾಂಡಿಗರು ಒಬ್ಬರಾದಮೇಲೊಬ್ಬರು ಪೆವಿಲಿಯನ್‌ ಪೆರೇಡ್‌ ನಡೆಸಿದರು. ಒಂದು ಹಂತದಲ್ಲಿ 45 ರನ್‌ ಗೆ 7 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಕೆಳಕ್ರಮಾಂಕದಲ್ಲಿ ಆಲ್‌ ರೌಂಡರ್‌ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 42 ರನ್ ಗಳಿಸಿ ಮಾನ ಕಾಪಾಡಿದರು. ಅಂತಿಮವಾಗಿ ನ್ಯೂಜಿಲ್ಯಾಂಡ್‌ 132 ರನ್‌ ಗಳಿಗೆ ಕುಸಿಯಿತು. ಇಂಗ್ಲೆಂಡ್‌ ಪರ ಮಾರಕ ದಾಳಿ ನಡೆಸಿದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಪಾದಾರ್ಪಣಾ ಪಂದ್ಯದಲ್ಲೇ ಮಿಂಚಿದ ಯುವವೇಗಿ ಮ್ಯಾಥ್ಯೂ ಪಾಟ್ಸ್ ತಲಾ ನಾಲ್ಕು ವಿಕೆಟ್ ಕಬಳಿಸಿದರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್‌ ಪ್ರಾರಂಭಿಸಿದ ಇಂಗ್ಲೆಂಡ್‌ ಪಡೆ ಭರ್ಜರಿ ಆರಂಭ ಪಡೆಯಿತು. ಓಪನರ್‌ ಗಳಾದ ಜಾಕ್ ಕ್ರಾಲಿ ಮತ್ತು ಒಲಿ ಪೋಪ್ ಮೊದಲ ವಿಕೆಟ್‌ ಗೆ 59 ರನ್‌ ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, ಚಹಾ ವಿರಾಮದ ಬಳಿಕ ನಾಟಕೀಯವಾಗಿ ಕುಸಿತ ಕಂಡ ಆಂಗ್ಲರ ಪಡೆ ಕೇವಲ 25 ರನ್‌ ಕಲೆಹಾಕುವಷ್ಟರಲ್ಲಿ 6 ವಿಕೆಟ್‌ ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತು. ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 116 ರನ್‌ ಕಲೆಹಾಕಿದ್ದು, ಇನ್ನೂ 16 ರನ್‌ ಗಳ ಹಿನ್ನಡೆಯಲ್ಲಿದೆ. ನ್ಯೂಜಿಲ್ಯಾಂಡ್‌ ಪರ ಸೌಥಿ, ಬೋಲ್ಟ್‌ ಹಾಗೂ ಜೆಮಿಸನ್‌ ತಲಾ 2 ಹಾಗೂ ಗ್ರ್ಯಾಂಡ್‌ಹೋಮ್ 1 ವಿಕೆಟ್‌ ಕಬಳಿಸಿದ್ದಾರೆ.

ಇಂಗ್ಲೆಂಡ್ ತಂಡ:
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಾಕ್), ಮ್ಯಾಥ್ಯೂ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.

ನ್ಯೂಜಿಲೆಂಡ್ ತಂಡ:
ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಾಕ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!