ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರವಹಿಸಿ: ಡಿಹೆಚ್‌ಒ ಡಾ.ಜಿ.ಪಿ.ರೇಣುಪ್ರಸಾದ್

ಹೊಸದಿಗಂತ, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯ ಎಲ್ಲಾ ಗ್ರಾಮಗಳ ಸಮೀಕ್ಷೆ ನಡೆಸಿ, ಕ್ರಿಯಾಯೋಜನೆ ತಯಾರಿಸಿ ಯಾವುದೇ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಡಳಿತ ವೈದ್ಯಾಧಿಕಾರಿಗಳು ತಾಲೂಕ ಆರೋಗ್ಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಈ ಜವಾಬ್ದಾರಿ ತಡಗೆದುಕೊಳ್ಳಬೇಕು ಎಂದರು.

ಗ್ರಾಮಗಳ ಕ್ರೂಡಿಕೃತ ಕ್ರಿಯಾ ಯೋಜನೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ವಹಿಸಿ, ತಾಲೂಕು ಮಟ್ಟಕ್ಕೆ ನೀಡಬೇಕು. ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆದ ಕ್ರಿಯಾಯೋಜನೆಗಳನ್ನ ಮೇಲ್ವಿಚಾರಣೆ ನಡೆಸಿ ತಾಲೂಕು ಮಟ್ಟದ ಕ್ರಿಯಾಯೋಜನೆಯನ್ನು ಜಿಲ್ಲೆಗೆ ತಲುಪಿಸಬೇಕು. ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿ ಕಳಿಸಬೇಕಾಗಿದೆ. 0-5 ಐದು ವರ್ಷದ ಒಳಗಿನ ಜಿಲ್ಲೆಯ ಎಲ್ಲಾ ಮಕ್ಕಳನ್ನು ಗುರುತಿಸಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಕ್ರಿಯಾಯೋಜನೆ ತಯಾರಿಸಿ ಎಂದು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ ಬಳ್ಳಾರಿ ಘಟಕದ ಕಣ್ಗಾವಲು ಅಧಿಕಾರಿ ಡಾ.ಶ್ರೀಧರ್ ತರಬೇತಿ ನೀಡುತ್ತಾ, ಕ್ರಿಯಾಯೋಜನೆಗಳ ನಮೂನೆಗಳನ್ನು ಯಾವ ರೀತಿ ತುಂಬಬೇಕು. ಗಮನ ಹರಿಸಬೇಕಾದ ಅಂಶಗಳು, ವಲಸೆ ಕಾರ್ಮಿಕರಿಗೆ ಸೇವೆ ಒದಗಿಸಲು ದುಸ್ತರವಾದ ಪ್ರದೇಶಗಳು, ಹೊರ ರಾಜ್ಯದಿಂದ ಬಂದ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಇದ್ದಿಲು ಸುಡುವವರು, ಇವರ ಮಕ್ಕಳುಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಯಾವುದೇ ಮಕ್ಕಳನ್ನು ಬಿಡದಂತೆ ಕ್ರಿಯಾ ಯೋಜನೆ ರೂಪಿಸಿ ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ ಮಾತನಾಡಿ, ಈ ಹಿಂದಿನ ವರ್ಷದಲ್ಲಿ 1,55,000 ಮಕ್ಕಳ ಗುರಿಯನ್ನು ನಿಗದಿಪಡಿಸಿ 224 ತಂಡಗಳನ್ನು ಜಿಲ್ಲೆಯಾದ್ಯಂತ ರಚಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿತ್ತು. ಅದರಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕ್ರಿಯಾಯೋಜನೆಯ ಕಡೆ ಗಮನ ಹರಿಸಿ ಮಕ್ಕಳ ಗುರಿ ಖಚಿತತೆಯನ್ನು ಪಡೆಸಿಕೊಳ್ಳಿ ಎಂದು ತಿಳಿಸಿದರು.

ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಕಾಶಿ, ಮಾಹಿತಿ ಶಿಕ್ಷಣ ಸಂವಹನ ವಿಭಾಗದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣ ನಾಯಕ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೀರೇಂದ್ರ ಪಾಟೀಲ್, ಬಿ.ಮೂಗಪ್ಪ, ಜಾನಕಿ, ವೀರೇಂದ್ರ ಪಾಟೀಲ್, ಎಲ್ಲಾ ತಾಲೂಕುಗಳ ತಾಲೂಕು ಆರೋಗ್ಯ ಅಧಿಕಾರಿಗಳು, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!