ಟರ್ಕಿ ಅಧ್ಯಕ್ಷೀಯ ಚುನಾವಣೆ: ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಎರ್ಡೊಗನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟರ್ಕಿಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಮತ್ತೊಂದು ಸುತ್ತಿನ ಮತದಾನ ಪ್ರಕ್ರಿಯೆ ಭಾನುವಾರ ಮುಕ್ತಾಯಗೊಂಡಿದೆ. ಹಾಲಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್‌ ಮತ್ತೆ ಆಯ್ಕೆಯಾಗುವ ಮೂಲಕ ಅವರು ತಮ್ಮ ಆಡಳಿತವನ್ನು 3ನೇ ದಶಕಕ್ಕೆ ವಿಸ್ತರಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಮೇ 14 ರಂದು ನಡೆದಿದ್ದ ಮತದಾನದಲ್ಲಿ ಎರ್ಡೋಗನ್ ಮತ್ತು ಅವರ ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್‌ಡರೊಗ್ಲ ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯದ ಹಿನ್ನೆಲೆಯಲ್ಲಿ 2ನೇ ಸುತ್ತಿನ ಮತದಾನ ನಡೆದಿದೆ. ಭಾನುವಾರ ನಡೆದ ಮತದಾನದಲ್ಲಿ ಎರ್ಡೊಗನ್ ಅವರು ವಿರೋಧ ಪಕ್ಷದ ನಾಯಕ ಕೆಮಲ್ ಕಿಲಿಕ್‌ಡರೊಗ್ಲು ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಭೂಕಂಪಪೀಡಿತ ಪ್ರದೇಶದಲ್ಲೂ ಎರ್ಡೋಗನ್ ಅವರ ಪಕ್ಷ ಪ್ರಾಬಲ್ಯ ಸಾಧಿಸಿದೆ. ಸಾಂಪ್ರದಾಯಿಕವಾಗಿ ಅಧ್ಯಕ್ಷರನ್ನು ಬೆಂಬಲಿಸುವ ಪ್ರದೇಶದಲ್ಲಿ 11 ಪ್ರಾಂತ್ಯಗಳಲ್ಲಿ 10ರಲ್ಲಿ ಗೆದ್ದು ಬೀಗಿದೆ.

ಭಾನುವಾರ ಟರ್ಕಿಯ ಸುಪ್ರೀಂ ಎಲೆಕ್ಷನ್ ಕೌನ್ಸಿಲ್ (YSK) ಘೋಷಿಸಿದ ಪ್ರಾಥಮಿಕ ಅಧಿಕೃತ ಫಲಿತಾಂಶಗಳ ಪ್ರಕಾರ, ಎರ್ಡೊಗನ್ ಶೇ 52.14 ರಷ್ಟು ಮತಗಳನ್ನು ಗಳಿಸುವ ಮೂಲಕ ಗೆದ್ದರು. ಕಿಲಿಕ್‌ಡರೊಗ್ಲ ಶೇ.47.86 ಮತಗಳನ್ನು ಪಡೆದಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಫಲಿತಾಂಶವನ್ನ ಅಧಿಕೃತವಾಗಿ ಘೋಷಿಸುವ ಮುನ್ನವೇ ಎರ್ಡೊಗನ್ ಇಸ್ತಾನ್‌ಬುಲ್‌ನಲ್ಲಿರುವ ತನ್ನ ನಿವಾಸದ ಹೊರಗೆ ಪ್ರಚಾರದ ಬಸ್‌ನ ಮೇಲೆ ಸಂಭ್ರಮಾಚರಣೆಯಲ್ಲಿದ್ದರು. ಟರ್ಕಿಯ ಧ್ವಜವನ್ನು ಬೀಸುತ್ತಾ ಹರ್ಷೋದ್ಗಾರದಿಂದ ಬೆಂಬಲಿಗರ ದೊಡ್ಡ ಗುಂಪನ್ನು ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರಕ್ಕೆ ಧನ್ಯವಾದ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!