Thursday, December 11, 2025

ಮದುವೆ ಮನೆಯಿಂದ ಚಿನ್ನಾಭರಣ ಕದ್ದು ಎಸ್ಕೇಪ್: 51.49 ಲಕ್ಷ ಮೌಲ್ಯದ ಆಭರಣ ವಶ

ಹೊಸದಿಗಂತ ವರದಿ,ದಾವಣಗೆರೆ:

ಖಾಸಗಿ ರೆಸಾರ್ಟ್ ವೊಂದರಲ್ಲಿನ ಮದುವೆ ಸಮಾರಂಭದಲ್ಲಿ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗಿದ್ದ ಆರೋಪಿಗಳ ಮಧ್ಯಪ್ರದೇಶದ ರಾಜ್ಯದ ಮನೆಯಿಂದ 51.49 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದು, ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಮಧ್ಯಪ್ರದೇಶ ರಾಜ್ಯದ ರಾಜಗಡ್ ಜಿಲ್ಲೆ ನರಸಿಂಗ್ ತಾಲ್ಲೂಕಿನ ಗುಲಖೇಡಾ ಗ್ರಾಮದ ಕರಣ್‌ವರ್ಮಾ @ ಕರಣ್ ಸಿಸೊಡಿಯಾ, ವಿನಿತ್ ಸಿಸೊಡಿಯಾ ತಲೆ ಮರೆಸಿಕೊಂಡಿರುವ ಕಳ್ಳತನ ಆರೋಪಿಗಳು. ಇವರ ಮನೆಯಲ್ಲಿ ಕದ್ದು ತಂದಿದ್ದ ಬಂಗಾರದ ಒಡವೆಗಳನ್ನು ಇಟ್ಟಿರುವ ಸ್ಥಳದ ಬಗ್ಗೆ ಖಾತ್ರಿಪಡಿಸಿಕೊಂಡು ಪೊಲೀಸರು ಸುಮಾರು 51,49,000 ರೂ. ಬೆಲೆಬಾಳುವ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ನವೆಂಬರ್ 14ರಂದು ಸಂಜೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಪೂರ್ವ ರೆಸಾರ್ಟ್ ನಲ್ಲಿ ಸಂಬoಧಿಕರ ಮದುವೆಗೆಂದು ಬಂದಿದ್ದಾಗ 535 ಗ್ರಾಂ ತೂಕದ 67,48,000 ರೂ. ಮೌಲ್ಯದ ಚಿನ್ನದ ಒಡವೆಗಳು ಕಳ್ಳತನವಾಗಿರುವ ಬಗ್ಗೆ ವಿ.ಪ್ರವೀಣ್ ಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಕೆ.ಟಿ.ಅಣ್ಣಯ್ಯ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ನಾನಾ ಆಯಾಮಗಳಿಂದ ಮತ್ತು ಸುಮಾರು 250 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳು ಮದ್ಯಪ್ರದೇಶ ರಾಜ್ಯದ ರಾಜಗಡ್ ಜಿಲ್ಲೆಯ ನರಸಿಂಗ್ ತಾಲ್ಲೂಕಿನ ಗುಲಖೇಡಾ ಗ್ರಾಮದವರೆಂದು ಗೊತ್ತಾಗಿದೆ. ನ.24ರಂದು ಪಿಎಸೈ ಪ್ರಭು ಡಿ.ಕೆಳಗಿನಮನಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡವು ಖಾಸಗಿ ವಾಹನದಲ್ಲಿ ಮಧ್ಯಪ್ರದೇಶ ರಾಜ್ಯದ ಪಚೋರಿ ನಗರಕ್ಕೆ ತೆರಳಿ ಸುಮಾರು 14 ದಿನಗಳ ಕಾಲ ಮಾರುವೇಷದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಸ್ಥಳೀಯ ಪೊಲೀಸರು ಹಾಗೂ ಬಾತ್ಮೀದಾರರ ಸಹಾಯದಿಂದ ಮನೆ ಪತ್ತೆ ಹಚ್ಚಿ ಹಿಡಿಯಲು ಹೋದಾಗ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಮನೆಯಲ್ಲಿನ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಗಡ ಜಿಲ್ಲೆಯ ಗುಲಖೇಡಾ, ಕಡಿಯಾ, ಸಾಂಸಿ ಮತ್ತು ಹುಲಕೆಡಾ ಗ್ರಾಮಗಳ ಹೆಚ್ಚಿನ ಜನರು ತಮ್ಮ ಪೂರ್ವಜರ ಕಾಲದಿಂದಲೂ ಕಳ್ಳತನ ಮಾಡುವುದನ್ನೇ ಕುಲಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಅಲ್ಲಿನ ಜನರು ಪೊಲೀಸರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿವುಳ್ಳವರಾಗಿದ್ದಾರೆ. ಸದರಿ ಗ್ರಾಮದ ಜನರು ಬ್ಯಾಂಡ್ ಬಜಾ ಗ್ಯಾಂಗ್ ಅಂತಲೇ ಕುಖ್ಯಾತಿ ಗಳಿಸಿದೆ. ಇವರು ಅದ್ಧೂರಿ ಮದುವೆ ಸಮಾರಂಭಗಳಲ್ಲಿ ಕಳ್ಳತನ ಮಾಡುವುದನ್ನೇ ರೂಢಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!