Saturday, April 1, 2023

Latest Posts

ತಳಮಟ್ಟದಲ್ಲಿ ಕನ್ನಡ ಕಾರ್ಯಕ್ರಮಗಳಿಗಾಗಿ ದತ್ತಿ ನಿಧಿ ಸ್ಥಾಪನೆ: ಕೇಶವ ಕಾಮತ್

ಹೊಸದಿಗಂತ ವರದಿ, ಮಡಿಕೇರಿ:
ತಳಮಟ್ಟದ ಸಾಹಿತ್ಯ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ನಡೆಸುವುದು ಮಾತ್ರವಲ್ಲದೆ, ಸಾಮಾಜಿಕ ಸೇವೆಯಲ್ಲಿ ತೊಡಗಿದ್ದವರ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಲು ದತ್ತಿ ನಿಧಿಯನ್ನು ಸ್ಥಾಪಿಸಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ನುಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಪಾಜೆ ಹೋಬಳಿ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಪೆರಾಜೆಯ ಜ್ಯೋತಿ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪದಗ್ರಹಣದ ಸಂಕೇತವಾಗಿ ಪರಿಷತ್ ಧ್ವಜವನ್ನು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೋಪಾಲ ಪೆರಾಜೆ ಅವರಿಗೆ ಕೇಶವ ಕಾಮತ್ ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಅಂಬೆಕಲ್ ನವೀನ್ ಅವರು, ಘಟಕದ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಅಧ್ಯಕ್ಷ ಗೋಪಾಲ ಪೆರಾಜೆ, ಗೌರವ ಕಾರ್ಯದರ್ಶಿಗಳಾದ ಸಂಗೀತಾ ರವಿರಾಜು ಮತ್ತು ಜಗದೀಶ ಕುಂಬಳಚೇರಿ ಹಾಗೂ ಕೋಶಾಧಿಕಾರಿ ಟೀನಾ ಸಂಪಾಜೆ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ನಂತರ ಮಾತನಾಡಿದ ಅವರು ಸಂಪಾಜೆ ಘಟಕ ತನ್ನ ವ್ಯಾಪ್ತಿಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ನಡೆಸುವ ಮೂಲಕ ಕನ್ನಡ ಸೇವೆ ಮತ್ತು ಕನ್ನಡ ಅಭಿವೃದ್ಧಿಯನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ‘ಕನ್ನಡ ಮಾಧ್ಯಮ ಕಲಿಕೆ ಮತ್ತು ಕನ್ನಡ ಶಾಲೆಗಳು’ ಎಂಬ ವಿಷಯದ ಮೇಲೆ ಮಾತನಾಡಿದ ಸುಳ್ಯ ತಾಲೂಕು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ್ ಪೇರಲ್ ಅವರು, ಕನ್ನಡ ಶಾಲೆಗಳ ಸ್ಥಿತಿಗತಿಗಳು ಮತ್ತು ಕನ್ನಡ ಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಉಳಿಸಿಕೊಳ್ಳಬೇಕಾದ ಅಗತ್ಯತೆಯ ಬಗ್ಗೆ ವಿವರವಾಗಿ ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್’ನ ರಾಜ್ಯ ನಿರ್ದೇಶಕ, ಮಂಗಳೂರು ವಿವಿ ಯ ತುಳು ಭಾಷಾ ಪೀಠದ ಸಂಯೋಜಕ ಡಾ. ಎಂ.ಕೆ. ಮಾಧವ, ಪೆರಾಜೆ ಗ್ರಾ. ಪಂ.ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಶಾಲಾ ಸಂಚಾಲಕ ಹರೀಶ್ ಮುಡ್ಕಜೆ, ಶಾಲಾ ಮುಖ್ಯೋಪಾಧ್ಯಾಯ ಎಂ.ಆರ್.ನರೇಂದ್ರ ಉಪಸ್ಥಿತರಿದ್ದರು.
ಕ.ಸಾ.ಪ ಮಡಿಕೇರಿ ತಾಲೂಕು ಕಾರ್ಯದರ್ಶಿ ಕೆ.ಯು. ರಂಜಿತ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.ಸಂಪಾಜೆ ಘಟಕದ ಕಾರ್ಯದರ್ಶಿ ಜಗದೀಶ ಕುಂಬಳಚೇರಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!