ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ: ಸಿಎಂ ಜತೆ ಕಟೀಲ್ ಚರ್ಚೆ

ಹೊಸದಿಗಂತ ವರದಿ, ಕೊಡಗು:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಚರ್ಚಿಸಿದರು.
ಯುನೈಟೆಡ್ ಕೊಡವ ಆರ್ಗನೈಝೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯಕುಮಾರ್ ಶೆಟ್ಟಿ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಮತ್ತಿತರರ ನಿಯೋಗದ ಬೇಡಿಕೆ ಹಿನ್ನೆಲೆಯಲ್ಲಿ ಕಟೀಲ್ ಅವರು ಸಿಎಂ ಅವರನ್ನು ಭೇಟಿ ಮಾಡಿದರು.
ಲಿಖಿತ ಮನವಿ ಸಲ್ಲಿಸಿ ನಿಗಮ ಸ್ಥಾಪಿಸುವ ಕುರಿತು ಪಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಪರಿಗಣಿಸುವಂತೆ ಕೋರಿಕೊಂಡರು. ಇದೇ ಸಂದರ್ಭ ಸಂಸದ ಪ್ರತಾಪಸಿಂಹ ಅವರು ಕೂಡಾ ನಿಗಮ ಸ್ಥಾಪನೆಗಾಗಿ ಪ್ರತ್ಯೇಕ ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಗಾಗಲೇ ಈ ಕುರಿತಂತೆ ಕೊಡವರು ಬೇಡಿಕೆ ಸಲ್ಲಿಸಿದ್ದಾರೆ. ಕೊಡಗಿನ ಶಾಸಕರೂ ಚರ್ಚಿಸಿದ್ದಾರೆ. ಕೊಡವ ಜನಾಂಗದ ಹಿತದೃಷ್ಟಿಯಿಂದ ನೂತನ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಕುರಿತಂತೆ ಪ್ರಸಕ್ತ ಬಜೆಟ್’ನಲ್ಲಿ ಪರಿಗಣಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ನಿಯೋಗವು ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಳಿನ್ ಕುಮಾರ್ ಕಟೀಲ್ ಅವರನ್ನು ಸಂಸದ ಪ್ರತಾಪಸಿಂಹ ಅವರೊಂದಿಗೆ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು. ಈ ಸಂದರ್ಭ ಸಂಸದರು ಕೊಡವ ಅಭಿವೃದ್ಧಿ ನಿಗಮದ ಅನಿವಾರ್ಯತೆ ಕುರಿತಂತೆ ರಾಜ್ಯಾಧ್ಯಕ್ಷರಿಗೆ ಮನವರಿಕೆ ಮಾಡಿದರು.
ಮಂಜು ಚಿಣ್ಣಪ್ಪ ಅವರು ನಿಗಮದ ಬೇಡಿಕೆ ಕುರಿತಂತೆ ಮಾಹಿತಿ ನೀಡಿದರು. ತೇಲಪಂಡ ಶಿವಕುಮಾರ್ ನಾಣಯ್ಯ ಮಾತನಾಡಿ ನಿಗಮ ಸ್ಥಾಪನೆಯಿಂದ ಕೊಡವರ ಅಭಿವೃದ್ಧಿಯಾಗಲಿದೆ ಎಂದರು.
ನಳಿನ್ ಕುಮಾರ್ ಕಟೀಲ್ ಮಾತನಾಡಿ ಗೊಣಿಕೊಪ್ಪಲಿನ ಮಂದ್ ನಮ್ಮೆಯಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿದರು. ತಮಗೆ ಕೊಡವರ ಬಗ್ಗೆ ಅತೀವ ಗೌರವ ಇದೆ, ಕೊಡವರ ಒಳಿತಿಗಾಗಿ ಎಲ್ಲಾ ಸಂದರ್ಭದಲ್ಲಿಯೂ ಜೊತೆಗಿರುವುದಾಗಿ ತಿಳಿಸಿದರು.
ನಿಯೋಗದಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ, ನೆಲ್ಲಮಕ್ಕಡ ಮಾದಯ್ಯ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!