ಹೊಸದಿಗಂತ ವರದಿ, ಮಡಿಕೇರಿ:
ಕೊಡವ ಜನಾಂಗದ ಸಮಗ್ರ ಶ್ರೇಯೋಭಿವೃದ್ಧಿಗೆ ನೂತನವಾಗಿ ‘ಕೊಡವ ಜನಾಂಗ ಅಭಿವೃದ್ಧಿ ನಿಗಮ’ ಸ್ಥಾಪಿಸಿ ಪ್ರಸಕ್ತ ಮುಂಗಡ ಪತ್ರದಲ್ಲಿ ಅನುದಾನ ಮೀಸಲಿರಿಸುವಂತೆ ಕೋರಿ ನಾಪೋಕ್ಲು ಕೊಡವ ಸಮಾಜದ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಕೊಡವ ಸಮಾಜದ ಪ್ರಮುಖರು, ಅಭಿವೃದ್ಧಿ ನಿಗಮ ಸ್ಥಾಪನೆ, ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಅವಕಾಶ ಮತ್ತು ಬಜೆಟ್’ನಲ್ಲಿ ಕೊಡಗಿಗೆ ಪ್ರತ್ಯೇಕವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಮನವಿ ಮಾಡಿದರು.
ನಿಯೋಗದ ನೇತೃತ್ವ ವಹಿಸಿದ್ದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ರಾಜ್ಯದಲ್ಲಿ ಬಹುಸಂಖ್ಯಾತರು ಹಾಗೂ ರಾಜಕೀಯವಾಗಿ ಪ್ರಬಲರಾಗಿರುವ ಜನಾಂಗಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ವಿಶೇಷ ಕಾಳಜಿಯಿಂದ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಇದೇ ಮಾದರಿಯಲ್ಲಿ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ, ಪರಂಪರೆಯೊಂದಿಗೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಅಪಾರ ಕೊಡುಗೆ ನೀಡಿರುವ ಕೊಡಗಿನ ಕೊಡವ ಜನಾಂಗಕ್ಕೂ ನಿಗಮ ರೂಪಿಸಬೇಕೆಂದು ಮನವರಿಕೆ ಮಾಡಿಕೊಟ್ಟರು.
ಕೊಡವ ಜನಾಂಗವು ಸೇನೆ, ಕ್ರೀಡೆ, ಆಡಳಿತಾತ್ಮಕ ಸೇವೆ, ವೈದ್ಯಕೀಯ, ನ್ಯಾಯಾಂಗ, ಕೃಷಿ ಮತ್ತು ವಾಣಿಜ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಕೊಡುಗೆ ನೀಡುತ್ತಾ ಬಂದಿದೆ. ಇತ್ತೀಚಿನ ಜನಗಣತಿಯ ಪ್ರಕಾರ ಕೊಡವರ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೊಡವ ಜನಾಂಗದಲ್ಲಿ ಶೇ.60ಕ್ಕಿಂತಲೂ ಹೆಚ್ಚಿನವರು ಹಿಂದುಳಿದವರಾಗಿದ್ದು, ಶೇ.30ಕ್ಕಿಂತಲೂ ಹೆಚ್ಚಿನವರು ಬಡತನರೇಖೆಗಿಂತ ಕೆಳಗಿದ್ದಾರೆ. ಇದು ರಾಜಕೀಯವಾಗಿ ದೇಶದಲ್ಲಿಯೇ ಅತ್ಯಂತ ದುರ್ಬಲ ಅಲ್ಪಸಂಖ್ಯಾತ ಸಮುದಾಯವಾಗಿದೆ. ಸರ್ಕಾರದ ಯಾವುದೇ ಯೋಜನೆ ಹಾಗೂ ಅನುದಾನ ಅರ್ಹ ಕೊಡವರನ್ನು ತಲುಪುತ್ತಿಲ್ಲ. 2009ರ ಯುನೆಸ್ಕೋ ವರದಿಯಂತೆ ಕೊಡವ ಭಾಷೆಯು ಅಳಿವಿನಂಚಿನಲ್ಲಿದೆ ಎಂದು ವಿವರಿಸಿದರು.
ಈಗಾಗಲೇ ರಾಜ್ಯದ ಕಾಡುಗೊಲ್ಲ, ವೀರಶೈವ, ಲಿಂಗಾಯಿತ, ಒಕ್ಕಲಿಗ, ಮರಾಠ, ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ ಸಮಾಜ, ಮಡಿವಾಳ ಸೇರಿದಂತೆ ಸುಮಾರು 20ಕ್ಕಿಂತಲೂ ಹೆಚ್ಚಿನ ಜನಾಂಗದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿದೆ. ಸಂವಿಧಾನದ 162ನೇ ವಿಧಿಯಂತೆ ರಾಜ್ಯ ಸರ್ಕಾರ ಪ್ರವರ್ಗ 3ಎ ಅಡಿಯಲ್ಲಿ ಬರುವ ಒಕ್ಕಲಿಗ ಸಮುದಾಯಕ್ಕೆ ನೀಡಿರುವಂತೆ ವಿನಾಶದಂಚಿನಲ್ಲಿರುವ ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಪ್ರತ್ಯೇಕ ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಕೊಡಗಿನ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕವಾಗಿ ವಿಶೇಷ ಪ್ಯಾಕೇಜ್’ನ್ನು ಬಜೆಟ್’ನಲ್ಲಿ ಘೋಷಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಕ್ರೀಡಾ ವಿವಿ ಸ್ಥಾಪಿಸಿ: ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಹೆಗ್ಗಳಿಕೆಯನ್ನು ಹೊಂದಿರುವ ಕೊಡಗು ಜಿಲ್ಲೆಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕ್ರೀಡಾ ವಿಶ್ವ ವಿದ್ಯಾನಿಲಯವನ್ನು ನೀಡಬೇಕೆಂದು ಶಿವಕುಮಾರ್ ನಾಣಯ್ಯ ಇದೇ ಸಂದರ್ಭ ಒತ್ತಾಯಿಸಿದರು.
ಹೈಕೋರ್ಟ್ ವಕೀಲ ಮಲ್ಲಂಗಡ ಎನ್.ನೆಹರು, ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ತಿರೋಡಿರ ರಂಜನ್ ತಮ್ಮಯ್ಯ ಹಾಗೂ ಕುಲ್ಲೇಟಿರ ಮಂದಣ್ಣ ಹಾಜರಿದ್ದರು. ಮುಖ್ಯಮಂತ್ರಿಗಳು ಬೇಡಿಕೆಗಳಿಗೆ ಪೂರಕ ಸ್ಪಂದನೆ ನೀಡಿದ್ದಾರೆ ಎಂದು ನಿಯೋಗ ಹರ್ಷ ವ್ಯಕ್ತಪಡಿಸಿದೆ.