ಸನಾತನ ಸಂಸ್ಕೃತಿಯಿಂದ ದೇವಾಲಯಗಳು ಉಳಿಯಲು ಸಾಧ್ಯ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಕಲ್ಲು ಶಿಲೆಗಳಿಂದ ದೇವಾಲಯಗಳನ್ನು ಕಟ್ಟಿದರೆ ಸಾಲದು. ಅವುಗಳನ್ನು ಮುನ್ನಡೆಸಿಕೊಂಡು ಹೋಗಬೇಕು. ಸನಾತನ ಸಂಸ್ಕೃತಿಯಿಂದ ಮಾತ್ರ ದೇವಾಲಯಗಳು ಉಳಿಯಲು ಸಾಧ್ಯ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಗೋನೂರು ಸಮೀಪವಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರದಿಂದ ನಡೆಯುತ್ತಿರುವ ಗುರುಭಿಕ್ಷಾ ವಂದನ ಹಾಗೂ ಶತಚಂಡಿಕಾಯಾಗದ ಎರಡನೇ ದಿನವಾದ ಶನಿವಾರದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಸ್ಕೃತಿ ಕಟ್ಟಿ ಬೆಳೆಸುವ ಪ್ರಯತ್ನದಿಂದ ದೇವಾಲಯಗಳು ಉಳಿಯುತ್ತವೆ. ಇಂದಿನ ಮಕ್ಕಳಲ್ಲಿ ಸಂಸ್ಕೃತಿಯ ಪರಿಚಯ ಮಾಡಿಸಬೇಕು. ಸಂಸ್ಕೃತಿ ಉಳಿಯಬೇಕಾದರೆ ಮಕ್ಕಳಿಗೆ ಹೆಸರಿಡುವಾಗಲೇ ಆರಂಭವಾಗಬೇಕು. ಮಾತೆಯರ ಮೂಲಕ ಮಕ್ಕಳಿಗೆ ಸಂಸ್ಕೃತಿ ಸಿಗಬೇಕು. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ದುಗುಡು, ತಾಪತ್ರೆ ಇದ್ದೇ ಇರುತ್ತದೆ. ಇವುಗಳ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಬೇಕಾದರೆ ದೇವಾಲಯಗಳಿಗೆ ಹೋಗಲೇಬೇಕು ಎಂದರು.
ಗೋನೂರಿನಲ್ಲಿರುವ ರಾಜರಾಜೇಶ್ವರಿ ದೇವಸ್ಥಾನ ಸುಂದರವಾದ ಪರಿಸರದಲ್ಲಿ ನಿರ್ಮಾಣವಾಗಿದೆ. ಶಾಂತಿ, ಸೌಖ್ಯ, ಜಯ, ನೆಮ್ಮದಿ, ಕೀರ್ತಿಯನ್ನು ಎಲ್ಲರೂ ಅಪೇಕ್ಷಿಸುವುದು ಸಹಜ. ಆದರೆ ಸುಮ್ಮನೆ ಕುಳಿತುಕೊಂಡರೆ ಅವುಗಳೆಲ್ಲಾ ಹತ್ತಿರ ಬರುವುದಿಲ್ಲ. ಪ್ರಯತ್ನದ ಜೊತೆಗೆ ಭಗವಂತನ ಅನುಗ್ರಹವೂ ಬೇಕು ಎದು ಹೇಳಿದರು.
ಬದುಕಿನಲ್ಲಿ ಪ್ರಯತ್ನ, ದೇವರ ಅನುಗ್ರಹ ಎರಡೂ ಪರಿಪೂರ್ಣವಾಗಿರಬೇಕು. ಎಲ್ಲರ ಹೃದಯದಲ್ಲೂ ದೇವರು ನೆಲೆಸಿದ್ದಾನೆ. ದೇವರ ಅನುಗ್ರಹ ಇಂದಿನ ಕಾಲದಲ್ಲಿ ದಿನದ ೨೪ ಗಂಟೆಯೂ ಇರಬೇಕು. ಬದುಕಿಗಾಗಿ ಆಯ್ದುಕೊಂಡ ವೃತ್ತಿ ದೇವರ ಪೂಜೆಯಾಗಬೇಕು. ಅಂದಾಗ ಮಾತ್ರ ನಾವು ಮಾಡುವ ಕೆಲಸ ಫಲ ನೀಡುತ್ತದೆ ಎಂದರು.
ಉಸಿರಾಟ, ಬದುಕು ಬೇರೆ ಅಲ್ಲ ಎನ್ನುವಂತೆ ಭಗವಂತನ ಆರಾಧನೆ, ಬದುಕಿನ ವೃತ್ತಿ ಬೇರೆಯಲ್ಲ. ಭಗವಂತನ ಆರಾಧನೆ ಪರಿಶುದ್ಧವಾಗಿದ್ದರೆ ಮೋಸ, ವಂಚನೆ, ಅವ್ಯವಹಾರ ಇವುಗಳ್ಯಾವು ಹತ್ತಿರ ಸುಳಿಯುವುದಿಲ್ಲ. ಪರಿಪೂರ್ಣ ಬದುಕಾಗಬೇಕು. ಮಾನವ ಹೇಗೆ ಬದುಕಬೇಕು ಎನ್ನುವ ಅನುಗ್ರಹವನ್ನು ಭಗವಂತ ಎಲ್ಲರಿಗೂ ಕಲ್ಪಿಸಿದ್ದಾನೆ. ಪ್ರಸ್ತುತ ಸಮಾಜದಲ್ಲಿ ಜಾಗೃತಿ ನಿರಂತರವಾಗಿರಬೇಕೆಂದು ತಿಳಿಸಿದರು.
ಶಿರಸಿ ಸ್ವರ್ಣವಲ್ಲಿ ಮಠದ ಆಸ್ಥಾನ ವಿದ್ವಾಂಸರಾದ ಬಾಲಚಂದ್ರಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರಿಗೂ ಭಗವಂತನ ಅನುಗ್ರಹ ಇರಲೇಬೇಕು. ಅದಕ್ಕಾಗಿ ಪ್ರತಿ ವರ್ಷವೂ ಇಲ್ಲಿ ಗುರುಭಿಕ್ಷಾ ವಂದನ ಹಾಗೂ ಶತಚಂಡಿಕಾಯಾಗ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ನೂರಾರು ಭಕ್ತರು ಮೂರು ದಿನಗಳು ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರಾಜರಾಜೇಶ್ವರಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆಂದು ಹೇಳಿದರು.
ನಾಗಶ್ರೀಭಟ್ ಪ್ರಾರ್ಥಿಸಿದರು. ರಾಜರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್‌ಭಟ್ ಸ್ವಾಗತಿಸಿದರು. ದೇವಸ್ಥಾನ ಸೇವಾ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!