ಹೊಸದಿಗಂತ ವರದಿ ಕುಶಾಲನಗರ:
ಸರಕಾರಿ ಕಟ್ಟಡದಲ್ಲಿ ವಾಸಿಸುತ್ತಿರುವ ಖಾಸಗಿ ವ್ಯಕ್ತಿಯನ್ನು ವಾಸಿಸುತ್ತಿರುವ ತೆರವುಗೊಳಿಸುವಂತೆ ಒತ್ತಾಯಿಸಿ ನಾಲ್ಕು ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆ ಅರೋಗ್ಯ ಇಲಾಖೆಯ ವತಿಯಿಂದ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ವಾಸಿಸುತ್ತಿದ್ದಾರೆ.
ಗ್ರಾಮ ಸಭೆಯ ತೀರ್ಮಾನದಂತೆ ಸರಕಾರಿ ಕಟ್ಟಡದ ಸರ್ವೆ ಮತ್ತು ತೆರವಿಗೆ ಕ್ರಮ ತೆಗೆದುಕೊಳ್ಳುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಹತ್ತು ದಿನಗಳ ಗಡುವು ತೆಗೆದುಕೊಂಡಿದ್ದರು.
ಆದರೆ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರು ಸರಕಾರಿ ಕಟ್ಟಡದಲ್ಲಿರುವ ವ್ಯಕ್ತಿಗಳನ್ನು ತೆರವುಗೊಳಿಸುವಂತೆ ಮತ್ತು ಕಟ್ಟಡಕ್ಕೆ ಬೀಗ ಹಾಕುವಂತೆ ಕಟ್ಟಡ ಮುಂಭಾಗ ಜಮಾಯಿಸಿದ ಗ್ರಾಮಸ್ಥರು ಅಭಿವೃದ್ಧಿ ಅಧಿಕಾರಿ ಮಂಜಳಾ ಅವರನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರಲ್ಲದೆ, ತಾಲೂಕು ತಹಶಿಲ್ದಾರರು ಸ್ಧಳಕ್ಕೆ ಬರಬೇಕೆಂದು ಒತ್ತಾಯಿಸಿದರು.
ಸುಮಾರು ಒಂದು ಗಂಟೆ ಕಾಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕಟ್ಟಡದ ಒಳಗೆ ದಿಗ್ಬಂಧನ ವಿಧಿಸಿದ ಪ್ರತಿಭಟನಾಕಾರರು,ಧಿಕ್ಕಾರ ಕೂಗಿದರು. ಬಳಿಕ ಪೋಲಿಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.
ನಂತರ ನಾಲ್ಕು ಗ್ರಾಮಗಳ ಪ್ರಮುಖರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಮತ್ತು ಸದಸ್ಯರ ಸಮ್ಮುಖದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಸರಕಾರಿ ಕಟ್ಟಡದಲ್ಲಿ ವಾಸಿಸುತ್ತಿರುವ ಖಾಸಗಿ ವ್ಯಕ್ತಿಯನ್ನು ತೆರವುಗೊಳಿಸುವಂತೆ ಕೋರಿದರು.
ಒಂದು ವಾರದ ಗಡುವು: ಗ್ರಾಮ ಪಂಚಾಯತಿ ಅರ್ಜಿ ಪ್ರಕಾರವಾಗಿ ಕಂದಾಯ ಇಲಾಖೆಯ ನಿಯಮಾನುಸಾರ ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ಅದರ ಸಮರ್ಪಕವಾದ ನಕಾಶೆ ದೊರೆತ ತಕ್ಷಣವೇ ಅದಕ್ಕೆ ಸಂಬಂಧಿಸಿದ ನಿಯಮಾನುಸಾರ ಕ್ರಮ ಕೈಗೊಳ್ಳಲು ಒಂದು ವಾರದ ಸಮಯ ಬೇಕಾಗುತ್ತದೆ ಎಂದು ಅರ್ಜಿದಾರರಿಗೆ ಕುಶಾಲನಗರ ತಾಲೂಕು ತಹಶೀಲ್ದಾರರು ತಿಳಿಸಿದರು.
ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯ ಹೆಚ್. ಎಸ್. ರವಿ.ಸದಸ್ಯರಾದ ಜಯಶೀಲಾ, ಲಕ್ಷ್ಮಿ, ಪ್ರಮುಖರಾದ ಚಿದಂಬರ್, ಧನಪಾಲ್, ಧನಂಜಯ, ಚಿಮ್ಮಿ, ಕುಮಾರ್, ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.