Friday, June 2, 2023

Latest Posts

ಕೋರ್ಟ್ ಛೀಮಾರಿ ಹಾಕಿದ ಮೇಲಾದರೂ ರಾಜಕೀಯ ಮಾಡುವುದು ಬಿಟ್ಟು ಬನ್ನಿ: ವಿಪಕ್ಷ ನಾಯಕರಿಗೆ ಜೋಶಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ಮೋದಿ ಅವರಿಂದ ನೂತನ ಸಂಸತ್ ಭವನ (New Parliament Building) ಉದ್ಘಾಟನೆ ಯಾಗುವುದನ್ನು (inauguration) ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ್ದ ವಿಪಕ್ಷ ನಾಯಕರಿಗೆ ಭಾರೀ ಮುಖಭಂಗವಾಗಿದೆ.

ರಾಷ್ಟ್ರಪತಿಯವರಿಂದಲೇ ಉದ್ಘಾಟನೆಯಾಗಬೇಕು ಎಂದು ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಸುಪ್ರೀಂ ಕೋರ್ಟ್ ನ ಈ ನಿರ್ಧಾರ ವಿಪಕ್ಷಗಳಿಗೆ ಮಾಡಿದ ಕಪಾಳಮೋಕ್ಷದಂತಿದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ನ ತೀರ್ಪಿನ ಬೆನ್ನಲ್ಲೇ ಟ್ವೀಟರ್ ಮೂಲಕ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿರುವ ಜೋಶಿ (Pralhad Joshi), ಸಂಸತ್ ಭವನದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಮಾಡಿದ ವಿಪಕ್ಷಗಳಿಗೆ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ ಎಂದಿದ್ದಾರೆ.

ಸಂಸತ್ ಭವನ ದೇಶದ ಹೆಮ್ಮೆಯ ಪ್ರತೀಕ ಎಂಬುದು ಎಲ್ಲರ ಗಮನದಲ್ಲಿರಲಿ. ನ್ಯಾಯಾಲಯ ಛೀಮಾರಿ ಹಾಕಿದ ಮೇಲಾದರೂ ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸುವುದನ್ನ ವಿಪಕ್ಷಗಳು ಬಿಡಲಿ ಎಂದು ಜೋಶಿ ಅವರು ವಿಪಕ್ಷ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಬಹಿಷ್ಕಾರದ ನಡೆಯಿಂದ ಹಿಂದೆ ಸರಿದು, ವಿಪಕ್ಷ ನಾಯಕರು ಇನ್ನಾದರೂ ನೂತನ ಸಂಸತ್ ಭವನ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರು ಮನವಿ ಮಾಡಿದ್ದಾರೆ.

ನೂತನ ಸಂಸತ್ ಕಟ್ಟಡ ರಾಷ್ಟ್ರಪತಿಗಳಿಂದ ಉದ್ಘಾಟಿಸುವಂತೆ ನಿರ್ದೇಶನ ಕೋರಿ ಅಡ್ವೋಕೇಟ್ ಜಯಾ ಅವರು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ಲೋಕಸಭೆ ಕಾರ್ಯಾಲಯಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!