ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿಯನ್ನು ಇಡಿ ವಿಚಾರಣೆಗೊಳಪಡಿಸುವ ಕುರಿತು ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದು ಸತ್ಯಾಗ್ರಹ ಮಾಡಿಯೇ ಮಾಡುತ್ತೇವೆಂದು ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯದಲ್ಲಿ ರಾಹುಲ್ ಗಾಂಧಿಯವರ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆಗೆ ಕರೆಕೊಟ್ಟಿತ್ತು. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾರಿ ನಿರ್ದೇಶನಾಲಯದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆಂದು ಹೇಳಿತ್ತು. ಆದರೆ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಲಾಗಿತ್ತು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಸುರ್ಜೆವಾಲಾ “ರಾಹುಲ್ ಗಾಂಧಿ ನೇತೃತ್ವದಲ್ಲಿ ಸತ್ಯಾಗ್ರಹ ಮುಂದುವರೆಯುತ್ತದೆ,ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಗೂ ಕೂಡ ಕಾಂಗ್ರೆಸ್‌ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಇನ್ನು ಈ ಆಡಳಿತ ಸರ್ಕಾರ ಹೇಗೆ ಕಾಂಗ್ರೆಸ್ ಬಾಯಿ ಮುಚ್ಚಿಸುತ್ತದೆ?” ಎಂದು ಪ್ರಶ್ನಿಸಿದ್ದಾರೆ.
“ನಾವು ಸಂವಿಧಾನದ ರಕ್ಷಕರು, ನಾವು ತಲೆಬಾಗುವುದಿಲ್ಲ ಅಥವಾ ಹೆದರುವುದಿಲ್ಲ. ಕಾಂಗ್ರೆಸ್ ಗೆ ಹೆದರಿ ಮೋದಿ ಸರ್ಕಾರವು ಇಷ್ಟೊಂದು ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದೆ. ಹೇಡಿ ಮೋದಿ ಸರ್ಕಾರವು ದೆಹಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ. ಇದು ಮೋದಿ ಸರ್ಕಾರವನ್ನು ಕಾಂಗ್ರೆಸ್ ನಡುಗಿಸಿದೆ ಎಂಬುದನ್ನು ಸಾಬೀತು ಪಡಿಸಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.