ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದನದಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ನೈತಿಕ ಸಮಿತಿಯು ಗುರುವಾರ ಉಚ್ಛಾಟನೆಗೆ ಶಿಫಾರಸ್ಸು ಮಾಡಿರುವ ಟಿಎಂಸಿ ಹಿರಿಯ ನಾಯಕಿ ಮಹುವಾ ಮೊಯಿತ್ರಾ, ಇದು ಕಾಂಗರೂ ಕೋರ್ಟ್ ನಿಂದ ಪೂರ್ವ ನಿಯೋಜಿತ ಪಂದ್ಯ’ ಎಂದು ಹೇಳಿದ್ದಾರೆ.
ಇದು ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಸಾವನ್ನು ಸೂಚಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅಧ್ಯಕ್ಷತೆಯ ಸಮಿತಿಯು ಗುರುವಾರ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ಸೂಚಿಸುವ ತನ್ನ ವರದಿಯನ್ನು ಅಂಗೀಕರಿಸಿತು.
ಈ ಕುರಿತು ಮಾತನಾಡಿದ ಮೊಯಿತ್ರಾ, ಈ ಲೋಕಸಭೆಯಲ್ಲಿ ಅವರು ನನ್ನನ್ನು ಹೊರಹಾಕಿದರೂ, ಮುಂದಿನ ಲೋಕಸಭೆಯಲ್ಲಿ ದೊಡ್ಡ ಜನಾದೇಶದೊಂದಿಗೆ ಹಿಂತಿರುಗುತ್ತೇನೆ ಎಂದು ಹೇಳಿದರು.
ಲೋಕಸಭೆ ನೈತಿಕ ಶಿಫಾರಸ್ಸಿನಲ್ಲಿ ಯಾವುದೇ ಆಶ್ಚರ್ಯ ಅಥವಾ ಪರಿಣಾಮವಿಲ್ಲ, ಇದು ಕಾಂಗರೂ ಕೋರ್ಟ್ನಿಂದ ಪೂರ್ವ ನಿಯೋಜಿತ ಪಂದ್ಯವಾಗಿದೆ.ಆದರೆ ದೇಶಕ್ಕೆ ದೊಡ್ಡ ಸಂದೇಶವೆಂದರೆ ಭಾರತಕ್ಕೆ ಇದು ಸಂಸದೀಯ ಪ್ರಜಾಪ್ರಭುತ್ವದ ಸಾವು ಎಂದು ಮೊಯಿತ್ರಾ ಹೇಳಿದರು.
ಶಿಫಾರಸನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಈ ನಿರ್ಧಾರ ಬಿಜೆಪಿ-ಅದಾನಿ ನಂಟು ಕುರಿತು ಪ್ರಶ್ನೆ ಕೇಳುವುದು, ಮಾಹಿತಿ ಬಹಿರಂಗಪಡಿಸುವುದನ್ನು ಮುಂದುವರೆಸದಂತೆ ತಡೆಯುವುದಿಲ್ಲ ಎಂದರು.
ಇದು ಕೇವಲ ಶಿಫಾರಸು, ಸದ್ಯಕ್ಕೆ ಏನೂ ಆಗಿಲ್ಲ.ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅದನ್ನು ತೆಗೆದುಕೊಳ್ಳಲಿ. ಇದರಿಂದ ನಿಜವಾಗಿಯೂ ನನಗೆ ಏನನ್ನೂ ಮಾಡಲಾಗದು, ಇದರಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದ ಮೊಹಿತ್ರಾ, ಬಿಜೆಪಿ ವಿರುದ್ಧ ಹರಿಹಾಯ್ದರು.
ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಹಾಸ್ಯವನ್ನು ಬಿಜೆಪಿ ಇಡೀ ದೇಶಕ್ಕೆ ತೋರಿಸಿದೆ ಎಂದು ನನಗೆ ಸಂತೋಷವಾಗಿದೆ ಎಂದರು. ಮೊದಲು, ಅವರು ನನ್ನನ್ನು ಹೊರಹಾಕಲಿ ನಂತರ ಮುಂದಿನ ಕ್ರಮಗಳನ್ನು ಪ್ರಕಟಿಸುವುದಾಗಿ ತಿಳಿಸಿದರು.