ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಸರಕಾರಿ ಶಾಲೆಗಳು ಆರಂಭವಾಗಿ ಅರ್ಧ ವರ್ಷವೇ ಕಳೆದರೂ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಲಾಗಿಲ್ಲ.
ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ಗಳ ನೀಡಲು ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು. ಆಗಸ್ಟ್ 19 ರಂದು ವರ್ಕ್ ಆರ್ಡರ್ ನೀಡಲಾಗಿದ್ದು, ಅಕ್ಟೋಬರ್ 4ರೊಳಗೆ ಶೂಗಳನ್ನು ಪೂರೈಸಲು ಕಂಪನಿಗೆ ತಿಳಿಸಲಾಗಿತ್ತು. ಆದರೆ, ಒಪ್ಪಂದದಂತೆ ಕೆಲಸ ನಿರ್ವಹಿಸವಲ್ಲಿ ಸಂಸ್ಥೆ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆಯ ಶಿಕ್ಷಣ ಇಲಾಖೆಯು ಗುತ್ತಿಗೆ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು, ವಿವರಣೆಯೊಂದಿಗೆ ಒಟ್ಟು ಮೊತ್ತದಿಂದ ಶೇ 2ರಷ್ಟು ದಂಡವನ್ನು ಪಾವತಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಹುಡುಗರಿಗೆ ಕಪ್ಪು ಶೂಗಳು ಮತ್ತು ಹುಡುಗಿಯರಿಗೆ ನೀಲಿ ಕ್ಯಾನ್ವಾಸ್ ಶೂಗಳನ್ನು ಎರಡು ಜೋಡಿ ಸಾಕ್ಸ್‌ಗಳೊಂದಿಗೆ ಆರ್ಡರ್ ಮಾಡಲಾಗಿತ್ತು ಆದರೆ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡುವಲ್ಲಿ ಸಂಸ್ಥೆ ವಿಫಲವಾಗಿದೆ. ಒಂದರಿಂದ 2ನೇ ತರಗತಿವರೆಗೆ 24,000 ವಿದ್ಯಾರ್ಥಿಗಳಿದ್ದು, ಎಲ್ಲರೂ ಶೂ, ಸಾಕ್ಸ್ ಗಳಿಂದ ವಂಚಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.