STORY | ಮಸಾಲ್ ದೋಸೆ ಮೇಲೆ ಆಸೆ ಇದ್ರೂ ಇಡ್ಲಿ ತಿಂದು ಹೋದ ಪುಟ್ಟ!

ಮೇಘನಾ ಶೆಟ್ಟಿ, ಶಿವಮೊಗ್ಗ

ಹೊಟೇಲ್ ಫುಲ್ ಗಜಿಬಿಜಿ, ಸ್ಕೂಲ್ ಟ್ರಿಪ್ ಬಂದಿದ್ ಮಕ್ಳೆಲ್ಲ ‘ನಂಗ್ ಇಡ್ಲಿ, ನಂಗ್ ಪೂರಿ, ನಂಗ್ ಮಸಾಲ್ ದೋಸೆ, ನಂಗ್ ವಡೆ ‘ಅಂತ ಕೂಗ್ತಾ ಇದ್ರು. ಟೀಚರ್‌ಗೆ ಹುಚ್ಚು ಹಿಡಿಯೋದೊಂದು ಬಾಕಿ ಇತ್ತು. ‘ಎಲ್ರೂ ಕೇಳ್ಸ್ಕೊಳಿ ನಿಮ್ ನಿಮ್ ಟೇಬಲ್ ಹತ್ರನೇ ಇರಿ. ವೇಟರ್ ಅವ್ರು ಬಂದು ಕೇಳ್ತಾರೆ ಏನ್ ಬೇಕೋ ಆರ್ಡರ್ ಮಾಡಿ. ನಿಮ್ ಹತ್ರ ಎಷ್ಟು ದುಡ್ಡಿದ್ಯೋ ಅಷ್ಟನ್ನೇ ಮಾಡಿ’ ಅಂತ ಟೀಚರ್ ಹೇಳಿದ್ರು.

ಇನ್ನೇನು ತಿಂಡಿಗೆ ಬಸ್ ನಿಲ್ಲಿಸ್ತಾರೆ ಅಂತ ಗೊತ್ತಾದ ತಕ್ಷಣ ಮಕ್ಕಳು ಬಸ್‌ನಲ್ಲಿ ನಂಗೆ ಇಡ್ಲಿ ಬೇಕೋ, ನಂಗೆ ಪಲಾವ್ ಕಣೊ ಅಂತ ಮಾತಾಡಕ್ಕೆ ಶುರು ಮಾಡಿದ್ರು. ಪುಟಾಣಿ ವಿಭುಗೆ ಮಾತ್ರ ಮಸಾಲ್ ದೋಸೆ ಅಂದ್ರೆ ತುಂಬಾ ಇಷ್ಟ. ಯಾವತ್ತು ಯಾವ ಹೊಟೇಲ್‌ಗೆ ಹೋದ್ರೂ ಅವನು ಫಸ್ಟ್ ಆರ್ಡರ್ ಮಾಡೋದೇ ಮಸಾಲ್ ದೋಸೆ.

ಟ್ರಿಪ್ ಮುಗ್ಸಿ ಇನ್ನೇನು ಮನೆಗೆ ತಲುಪೋಕೆ ಬರೀ ಒಂದು ಗಂಟೆ ಬಾಕಿ ಇತ್ತು. ಗಂಟೆ ಒಂಬತ್ತಾಗಿತ್ತು, ಮಕ್ಕಳಿಗೆ ಹಸಿವಾಗುತ್ತೆ ಅಂತ ಟೀಚರ್ ಹೊಟೇಲ್ ಹತ್ತಿರ ಗಾಡಿ ನಿಲ್ಲಿಸಿದ್ರು. ಟ್ರಿಪ್‌ನಲ್ಲಿ ಮಕ್ಕಳು ಗೊಂಬೆ, ಮಾಸ್ಕ್, ಪೀಪಿ, ಬಳೆ ಅಂತೇನೇನೋ ತಗೊಂಡು ಮನೆಯವ್ರು ಕೊಟ್ಟ ದುಡ್ಡೆಲ್ಲ ಖಾಲಿ ಮಾಡ್ಕೊಂಡಿದ್ರು.

ವೇಟರ್ ಬಂದು ಏನು ಬೇಕು ಅಂತ ಕೇಳಿದ್ರು. ವಿಭು ಫ್ರೆಂಡ್ಸ್ ಎಲ್ಲ ಚೌಚೌ ಬಾತ್, ಪಲಾವ್, ಪೂರಿ ಅಂತ ಆರ್ಡರ್ ಮಾಡಿದ್ರು. ವಿಭು ‘ಮಸಾಲ್ ದೋಸೆಗೆ ಎಷ್ಟ್ ದುಡ್ಡು ಅಣ್ಣ’ ಅಂತ ಕೇಳ್ದ. ’60 ರೂಪಾಯಿ’ ಅಂತ ವೇಟರ್ ಹೇಳಿದ್ರು. ವಿಭು ಜೇಬಿಗೆ ಕೈ ಹಾಕಿ ದುಡ್ಡು ಎಣಿಸ್ದ. ಪರ್ಫೆಕ್ಟ್ ವಿಭು ಹತ್ರ ಕರೆಕ್ಟ್ ಆಗಿ 60 ರೂಪಾಯಿ ಉಳ್ದಿತ್ತು.

ಆದ್ರೆ ವಿಭು ವೇಟರ್‌ನ ಮತ್ತೆ ಕೇಳ್ದ ‘ಅಣ್ಣ ಚೌ ಚೌ ಬಾತ್ ಎಷ್ಟು’, ಅವ್ರು ಹೇಳಿದ್ರು ’55 ರೂಪಾಯಿ’. ಅಷ್ಟೊತ್ತಿಗಾಗ್ಲೇ ವೇಟರ್ ಪೇಷೆನ್ಸ್ ಮುಗ್ದೋಗಿತ್ತು. ಆರ್ಡರ್ ಜಾಸ್ತಿ ಇದೆ, ಮಕ್ಕಳ ಗಿಜಿಬಿಜಿ ಬೇರೆ ತಲೆ ಕೆಡೋ ಹಾಗ್ ಮಾಡ್ತಿದೆ. ಬಾಸ್ ಬೇರೆ ಕೂಗಾಡ್ತಿದಾರೆ. ಇನ್ಯಾರ‍್ಗೋ ಚಟ್ನಿ ಬೇಕು.

‘ಯಾವ್ದೋ ಒಂದ್ ಬೇಗ ಆರ್ಡರ್ ಮಾಡಪ್ಪ’ ಅಂತ ರೇಗ್ದ ವೇಟರ್ ಅಣ್ಣ. ಆದರೆ ವಿಭುಗೆ ವೇಟರ್ ಟೆನ್ಷನ್ ಅರ್ಥ ಆಗೋ ವಯಸ್ಸಲ್ಲ. ‘ಅಣ್ಣ ಒಂದು ಪ್ಲೇಟ್ ಇಡ್ಲಿಗೆ ಎಷ್ಟು ದುಡ್ಡು’ ಅಂತ ಕೇಳ್ದ. ಲಾಸ್ಟ್ ಟೈಮ್ ಹೇಳ್ತಿದಿನಿ ಅಂತ ವೇಟರ್ ‘ಎರಡು ಇಡ್ಲಿ ಒಂದು ವಡೆಗೆ 45’ ರೂಪಾಯಿ ಅಂತ ಹೇಳಿದ. ‘ಸರಿ ಅಣ್ಣಾ ಇಡ್ಲಿ ವಡೆನೆ ಕೊಡಿ’ ಅಂತ ವಿಭು ಹೇಳಿದ.

ವಿಭು ಫ್ರೆಂಡ್ಸ್‌ಗೆ ಆಶ್ಚರ್ಯ ಆಯ್ತು, ಇವನಿಗೆ ಇಡ್ಲಿ ಇಷ್ಟನೇ ಇಲ್ಲ ಆದ್ರೂ ತಿಂತಾನಾ ಅಂದ್ಕೊಂಡ್ರು. ಎಲ್ಲರಿಗೂ ಅವರವರ ತಿಂಡಿ ಬಂತು ತಿಂದು ಮುಗಿಸಿ ಬಸ್ ಹತ್ತಿದ್ರು. ವೇಟರ್ ಬಂದು ತಟ್ಟೆ ಎಲ್ಲ ಎತ್ತುವಾಗ ವಿಭು ತನ್ನ ತಟ್ಟೆ ಕೆಳಗೆ 15 ರೂಪಾಯಿ ಟಿಪ್ಸ್ ಇಟ್ಟು, ‘ವೇಟರ್ ಅಣ್ಣಂಗೆ’ ಅಂತ ಟಿಶ್ಯೂನಲ್ಲಿ ಬರ್ದಿದ್ದ!

ನಿಮ್ಮ ಸಂಬಳ ಕಮ್ಮೀನೇ ಇರಬಹುದು, ಅವರಿವರಿಗೆ ಕಂಪೇರ್ ಮಾಡಿ ಬೇಸರ ಮಾಡ್ಕೊಂಡಿರಬಹುದು. ನಿಮಗಿಂತ ಕೆಳಗೆ ಇರೋರನ್ನು ಒಮ್ಮೆ ನೋಡಿ, ನಿಮ್ಮ ಕೈಲಾದ ಸಹಾಯ ಮಾಡಿ. ಹೆಚ್ಚೇನಲ್ಲ, ನೂರಕ್ಕೆ ಒಂದು ರೂಪಾಯಿ. ನಿಮ್ಮ ಸುತ್ತಮುತ್ತ ಒಂದು ಹೊತ್ತು ಊಟಕ್ಕೆ ಪರದಾಡುವ ಕುಟುಂಬ, ಬರಿಗಾಲಿನಲ್ಲಿ ನಡೆಯುವ ಮಕ್ಕಳು, ಪುಸ್ತಕ ಕೊಳ್ಳಲಾರದ ವಿದ್ಯಾರ್ಥಿಗಳು ಹೀಗೆ ಯಾರಿಗಾದರೂ ಸಹಾಯ ಮಾಡಿ. ಮಾಡಿದ ಒಳ್ಳೆ ಕೆಲಸ ನಿಮ್ಮ ಪುಣ್ಯಕ್ಕೆ ಸೇರ್ಕೋತಾ ಹೋಗತ್ತೆ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!