ಸರಕಾರವೇ ಬೆಳಗಾವಿಯಲ್ಲಿ ಇದ್ದರೂ ಮುಖ್ಯಮಂತ್ರಿ, ಡಿಜಿಪಿ ಬರಲಿಲ್ಲವೇಕೆ?: ಬಿಜೆಪಿ ಸತ್ಯಶೋಧನಾ ಸಮಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಇಡೀ ರಾಜ್ಯ ಸರಕಾರವೇ ಬೆಳಗಾವಿಯಲ್ಲಿ ಇದ್ದರೂ ಮುಖ್ಯಮಂತ್ರಿ, ಡಿಜಿಪಿ, ಮುಖ್ಯ ಕಾರ್ಯದರ್ಶಿಗಳು ಮಹಿಳೆ ನಗ್ನಗೊಳಿಸಿ ಥಳಿಸಿದ ಘಟನೆ ನಡೆದ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲವೇಕೆ, ಸಂತ್ರಸ್ತೆಯನ್ನು ಭೇಟಿ ಮಾಡಿಲ್ಲವೇಕೆÉ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಸಂಸದರಾದ ಅಪರಾಜಿತಾ ಸಾರಂಗಿ, ಸುನಿತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ ಅಲ್ಲದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರ ನಿಯೋಗವು ಇಂದು ಬೆಳಗಾವಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ, ನಗ್ನಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆಯ ಮಾಹಿತಿ ಸಂಗ್ರಹಿಸಿತು. ಅಲ್ಲದೆ ನಿಯೋಗವು ಸಂತ್ರಸ್ತೆಯನ್ನೂ ಭೇಟಿ ಮಾಡಿದರು .
ಅಪರಾಜಿತಾ ಸಾರಂಗಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ರಾಷ್ಟ್ರವೇ ತಲೆತಗ್ಗಿಸುವ ಘಟನೆ ಇದಾಗಿದೆ. ಸರಕಾರದ ಪ್ರಮುಖರು ಸಂತ್ರಸ್ತೆಯನ್ನು ಯಾಕೆ ಭೇಟಿ ಮಾಡಿಲ್ಲ ಎಂದು ಪ್ರಶ್ನಿಸಿದರು.

ಘಟನೆ ನಡೆದು 2 ಗಂಟೆವರೆಗೂ ಪೊಲೀಸರು ಸ್ಥಳಕ್ಕೆ ಬಂದಿಲ್ಲ. ಠಾಣಾಧಿಕಾರಿಗೆ ಸ್ಥಳಕ್ಕೆ ಹೋಗಬೇಕಾದಷ್ಟು ಮಹತ್ವದ ಪ್ರಕರಣ ಎಂದು ಅನಿಸಲಿಲ್ಲವೇ? ಮಹಿಳೆ, ಅದೂ ದಲಿತ ಮಹಿಳೆಯ ಮೇಲಿನ ದೌರ್ಜನ್ಯ ಇದಾಗಿದ್ದರೂ ಅವರು ಕೂಡಲೇ ಸ್ಥಳಕ್ಕೆ ತೆರಳಲಿಲ್ಲವೇಕೆ ಎಂದು ಕೇಳಿದರು.

ರಾಜ್ಯದ ಮಹಿಳೆಯರ ಸುರಕ್ಷತೆ ರಾಜ್ಯ ಸರಕಾರದ ಆದ್ಯತೆ ಆಗಬೇಕು. ಅದು ಪ್ರಥಮ ಆದ್ಯತೆ ಆಗಿರಲಿ ಎಂದೂ ಅವರು ಸೂಚಿಸಿದರು.

ಇಂಥ ಘಟನೆ ಯಾಕೆ ಆಗಿದೆ? ಘಟನೆ ನಡೆದ ಮೇಲೆ ಕೂಡ ರಾಜ್ಯ ಸರಕಾರ ವಿಳಂಬವಾಗಿ ಸ್ಪಂದಿಸುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದು ಮಹಿಳೆಯರ ಘನತೆಯ ಪ್ರಶ್ನೆ ಎಂದೂ ಅವರು ಅಭಿಪ್ರಾಯಪಟ್ಟರು.

ಶ್ರೀಮತಿ ಆಶಾ ಲಾಕ್ರಾ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ವಸ್ತುಸ್ಥಿತಿ ತಿಳಿಯಲು ಇಲ್ಲಿ ಬಂದಿದ್ದೇವೆ ಎಂದು ತಿಳಿಸಿದರು.

ಮಧ್ಯರಾತ್ರಿ ಅಸಹಾಯಕ ಮಹಿಳೆಯ ಮೇಲೆ ಆಕ್ರಮಣ ನಡೆಸಲಾಗಿದೆ. ಮಹಿಳೆಯನ್ನು ಪರೇಡ್ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ತಡವಾಗಿ ಪೊಲೀಸರು ಆಗಮಿಸಿದ್ದಾರೆ. ಠಾಣೆ ಬಹಳ ದೂರದಲ್ಲಿ ಇಲ್ಲ; ಆದರೂ ಪೊಲೀಸರು ಸ್ಪಂದಿಸಿಲ್ಲವೇಕೆ? ಎಂದು ನೋವಿನಿಂದ ಪ್ರಶ್ನಿಸಿದರು.

ದುರ್ಘಟನೆ ನಡೆದ ಗ್ರಾಮವು ಪೊಲೀಸ್ ಠಾಣೆಯಿಂದ 10-11 ಕಿಮೀ ದೂರದಲ್ಲಿದೆ. ತುರ್ತು ಸ್ಪಂದನಾ ವ್ಯವಸ್ಥೆ ಠಾಣೆಯಲ್ಲಿ ಇದ್ದರೆ ಕೇವಲ 10-15 ನಿಮಿಷದಲ್ಲಿ ಅಲ್ಲಿಗೆ ಧಾವಿಸಬೇಕಿತ್ತು. ಆದರೆ, ಕೂಡಲೇ ಬಂದಿಲ್ಲ. ಠಾಣಾಧಿಕಾರಿ ಎನಿಸಿದ ಇನ್‍ಸ್ಪೆಕ್ಟರ್ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದನ್ನು ಸಣ್ಣ ಘಟನೆ ಎಂದು ಭಾವಿಸಿದ್ದರು. ಕಿರಿಯ ಅಧಿಕಾರಿಗಳನ್ನು ಕಳಿಸಿದ್ದು, ಬೆಳಿಗ್ಗೆ 8ಕ್ಕೆ ಅಲ್ಲಿಗೆ ಬಂದಿದ್ದಾರೆ ಎಂದು ಆಕ್ಷೇಪಿಸಿದರು.

ಠಾಣಾಧಿಕಾರಿ ಇಷ್ಟು ನಿರ್ಲಕ್ಷ್ಯ ವಹಿಸಲು ಹೇಗೆ ಸಾಧ್ಯ? ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ನಮಗೆ ಅನಿಸುತ್ತಿದೆ ಎಂದು ತಿಳಿಸಿದರು. ಠಾಣಾಧಿಕಾರಿಯ ನಿರ್ಲಕ್ಷ್ಯವು ಕಾಂಗ್ರೆಸ್ ಸರಕಾರದ ಮಾನಸಿಕತೆಯ ಪ್ರತೀಕ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 43 ಸಾವಿರ ಕ್ರಿಮಿನಲ್ ಕೇಸುಗಳು ದಾಖಲಾಗಿವೆ ಎಂದೂ ಅವರು ವಿವರಿಸಿದರು. ತಂಡದ ಇತರ ಸದಸ್ಯರು, ಬಿಜೆಪಿ ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

ಇದಕ್ಕೂ ಮೊದಲು ತಂಡವು ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ ನೆರ್ಲಿ, ಬೆಳಗಾವಿ ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಶ್ಮಾ ಪಾಟೀಲ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ಪಾಟೀಲ, ಮಾಜಿ ಎಂ.ಎಲ್.ಸಿ ಮಹಾಂತೇಶ ಕವಟಗಿಮಠ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವಣಾಚೆ, ಮುಖಂಡರಾದ ಬಸವರಾಜ ಹುಂದ್ರಿ ಹಾಗೂ ಪವನ ಕತ್ತಿ ಅವರ ಜೊತೆ ಮಾತನಾಡಿ, ಈ ಅಮಾನವೀಯ ಕೃತ್ಯದ ಕುರಿತ ಮಾಹಿತಿಗಳನ್ನು ಪಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!