ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಸೇನೆಯ ದಾಳಿಗೆ ಗಾಜಾ ಪಟ್ಟಿ ನಾಶವಾಗಿದ್ದು, ರಾಕೆಟ್, ಬಾಂಬ್ಗಳ ಸ್ಫೋಟದಲ್ಲಿ ಪ್ರತಿ 10 ನಿಮಿಷಕ್ಕೆ ಓರ್ವ ಮಗು ಸಾವನ್ನಪ್ಪಿದರೆ, ಇಬ್ಬರು ಗಾಯಗೊಳ್ಳುತ್ತಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದ ತುರ್ತು ವೈದ್ಯಕೀಯ ಕೇಂದ್ರವು ಹೇಳಿಕೊಂಡಿದೆ.
ಇಸ್ರೇಲ್ ಗಾಜಾ ಮೇಲೆ ದಾಳಿಶುರುವಾದಲ್ಲಿಂದ 3,900 ಮಕ್ಕಳು ಸಾವನ್ನಪ್ಪಿದ್ದಾರೆ. 8,067 ಮಕ್ಕಳು ಗಾಯಗೊಂಡಿದ್ದಾರೆ. 1,250 ಮಕ್ಕಳು ನಾಪತ್ತೆಯಾಗಿದ್ದಾರೆ. ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಸಾವನ್ನಪ್ಪಿದವರ ಪೈಕಿ ಶೇಕಡಾ 70 ರಷ್ಟು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ ಎಂದು ತುರ್ತು ಕೇಂದ್ರದ ನಿರ್ದೇಶಕ ಮೊಟಾಸೆಮ್ ಸಲಾ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ದಾಳಿ ಬಳಿಕ, ನಿರಂತರವಾಗಿ ಗಾಜಾ ಪಟ್ಟಿಯ ಮೇಲೆ ಬಾಂಬ್ ಸುರಿಸುತ್ತಿರುವ ಇಸ್ರೇಲ್ ಸೇನೆ 9 ಸಾವಿರಕ್ಕೂ ಅಧಿಕ ಪ್ಯಾಲೆಸ್ಟೈನಿಯನ್ನರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.