ರಾಜ್ಯದ ಪ್ರತಿ ಅರ್ಹ ವಿದ್ಯಾರ್ಥಿಗೂ ಉದ್ಯೋಗ ಸಿಗಬೇಕು: ಸಚಿವ ಅಶ್ವಥ್‌ನಾರಾಯಣ್

ದಿಗಂತ ವರದಿ ಮಂಗಳೂರು:

ರಾಜ್ಯದ ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಗೂ ಉದ್ಯೋಗ ಸಿಗಬೇಕು ಎಂಬುದು ರಾಜ್ಯ ಸರಕಾರದ ಆಶಯವಾಗಿದೆ. ಪ್ರಸ್ತುತ ಲಕ್ಷಾಂತರ ಉದ್ಯೋಗ ಇದೆ. ಆದರೆ, ಅರ್ಹತೆ ಹೊಂದಿದ ಅಭ್ಯರ್ಥಿಗಳು ಇಲ್ಲದ ಸ್ಥಿತಿ ಇದೆ. ಇದಕ್ಕಾಗಿ ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಗೆ ಸರಕಾರ ಕ್ರಮ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಹೇಳಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ವತಿಯಿಂದ ನಗರದ ಕೊಟ್ಟಾರಚೌಕಿ ಎಜೆ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಗುರುವಾರ ನಡೆದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ಕೌಶಲ್ಯತೆ ಮೂಲಕ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಶಕ್ತಿ ಬರುತ್ತದೆ. ಇಂದು ನಾವು ವಿಶ್ವದ ಜತೆ ಸ್ಪರ್ಧೆ ಮಾಡಬೇಕಾದ ಕಾರಣ ಉದ್ಯೋಗ ದೊರೆಯಲು ವ್ಯವಸ್ಥಿತ ತರಬೇತಿ ಅಗತ್ಯ. ಈ ಹಿನ್ನೆಲೆಯಲ್ಲಿ ರಾಜ್ಯದ 150 ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಇಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಣ ಮಾಡಲಾಗುತ್ತಿದ್ದು, ಐಐಟಿ ಪಠ್ಯಕ್ರಮ ಅಳವಡಿಸಲಾಗುತ್ತಿದೆ. ನಾಲ್ಕು ವಾರ ಇದ್ದ ಇಂಟರ್ನ್‌ಶಿಪ್ ಅವಧಿಯನ್ನು ೩೬ ವಾರಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಕೈಗಾರಿಕಾ ಸಂಸ್ಥೆಗಳ ಜತೆಗಿನ ಸಂಬಂಧ ಗಟ್ಟಿಗೊಳ್ಳಲಿದೆ. ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೂ ಡಿಜಿಟಲ್ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶಾಸಕ ಡಾ. ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ಅಲೆಮಾರಿ ಅರೆಅಲೆಮಾರಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೈಸೂರು ಇಲೆಕ್ಟ್ರಿಕಲ್ಸ್ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಸ್ಥಳೀಯ ಕಾರ್ಪೋರೇಟರ್ ಕಿರಣ್ ಕುಮಾರ್, ರೋಬೋಸಾಫ್ಟ್ ಕಂಪೆನಿ ಮುಖ್ಯಸ್ಥ ರೋಹಿತ್ ಭಟ್, ಕೌಶಲ್ಯ ಅಭಿವೃದ್ಧಿ ನಿಗಮ ಎಂಡಿ ಅಶ್ವಿನ್ ಗೌಡ, ಡಾ. ಸಂಜೀವ ಕುಮಾರ್ ಗುಪ್ತಾ ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!