ಆಯುರ್ವೇದ ಗಿಡಗಳನ್ನು ಪ್ರತಿಯೊಬ್ಬರು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು: ಪೇಜಾವರ ಶ್ರೀ

ಹೊಸದಿಗಂತ ವರದಿ, ಮೈಸೂರು:

ಆಯುರ್ವೇದ ಗಿಡಗಳನ್ನು ಪ್ರತಿಯೊಬ್ಬರು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಉಡುಪಿಯ ಪೇಜವಾರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಹೇಳಿದರು.
ಭಾನುವಾರ ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರ ಮೈಸೂರು ವತಿಯಿಂದ ನಗರದ ವಿಜಯವಿಠ್ಠಲ ಶಾಲೆಯಲ್ಲಿ ಆಯೋಜಿಸಲಾಗಿದ್ದ ಆಯುರ್ವೇದ ಉತ್ಸವಕ್ಕೆ ಧನ್ವಂತರಿ ಮಾತೆಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ತುಳಸಿಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಶ್ರೀರಾಮಚಂದ್ರ, ಶ್ರೀಕೃಷ್ಣರ ಕಾಲದಿಂದಲೂ ಸಹ ಪ್ರತಿನಿತ್ಯದ ಆಚರಣೆ ಆರೋಗ್ಯ ಆಹಾರ ಪದ್ದತಿಯಲ್ಲಿ, ಆಯುರ್ವೇದ ಬಳಕೆಯ ಪರಂಪರೆ ಬಂದಿದೆ. ತುಳಸಿಯೂ ಪ್ರಾರ್ಥನೆ ಪೂಜಾಕೈಂಕರ್ಯದ ಜೊತೆಯಲ್ಲಿ ಮನುಷ್ಯನಿಗೆ ರೋಗನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗುತ್ತದೆ. ಎಲ್ಲರ ಮನೆಗಳ ಮುಂದೆ ತುಳಸಿ ಗಿಡ ಸೇರಿದಂತೆ ಇನ್ನಿತರ ಅಯುರ್ವೇದ ಗಿಡಗಳಿಗೆ ನೀರೆರದು ಪೋಷಿಸಿದರೆ, ಪರಿಸರ ಸಂರಕ್ಷಣೆಯಾಗಿ, ರೋಗರುಜಿನಗಳು ನಿವಾರಣೆಯಾಗುತ್ತವೆ. ಹಾಗಾಗಿ ಸಂಘ ಸಂಸ್ಥೆಗಳು ಯುವಸಮೂಹ ಹೆಚ್ಚಾಗಿ ಆಯುರ್ವೇದ ಗಿಡಗಳನ್ನು ನೆಡುವ ಅಭಿಯಾನ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೇ ಶ್ರೀನಿವಾಸ ಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಆಯುರ್ವೇದ ದಿವಸ್ ಧನ್ವಂತರಿ ಜಯಂತಿಯoದು, ಪ್ರತಿ ವರ್ಷ ವಿಶೇಷ ಯೋಜನೆಗಳನ್ನ ಕಾರ್ಯರೂಪಕ್ಕೆ ತಂದಿದ್ದು, ಈಬಾರಿ ಹರ್ ಗರ್ ಆಯುರ್ವೇದ ಶೀರ್ಷಿಕೆಯ ಮೂಲಕ ಆಯುಷ್ ಇಲಾಖೆ ಮನೆಮನೆಗಳಿಗೆ ಆಯುರ್ವೆದ ಗಿಡಗಳ ವಿತರಣೆ ಅರಿವು ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಆಯುರ್ವೇದ ಪದ್ಧತಿಯು ಸಾವಿರಾರು ವರ್ಷಗಳಿಂದ ಭಾರತದಲ್ಲಿದೆ. ಪೂರ್ವಜರು ಆಯುರ್ವೇದವನ್ನ ಆಹಾರ ಪದ್ದತಿಯಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಕಾರಣ ನೂರಾರು ವರ್ಷ ಬದುಕುತ್ತಿದ್ದರು. ಹಾಗಾಗಿ ಇಂದಿನ ಯುವಪೀಳಿಗೆ ಆಯುರ್ವೇದ ಪದ್ಧತಿ, ಆಹಾರ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಬಳಸುವಲ್ಲಿ ಮುಂದಾದರೆ ಆರೋಗ್ಯಕರ ವಾತಾವರಣ ನಿರ್ಮಿಸಬಹುದು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಆಂಜನೇಯಮೂರ್ತಿ, ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಹಿರಿಯ ವೈದ್ಯರಾದ ಗುರುಬಸವರಾಜು, ಸರ್ಕಾರಿ ಆಯುರ್ವೇದ ಸಂಶೋಧನ ಕೇಂದ್ರ ಸಹಾಯಕ ನಿರ್ದೇಶಕರಾದ ಲಕ್ಷಿ÷್ಮನಾರಾಯಣ್, ವಿಜಯವಿಠ್ಠಲ ಶಾಲೆಯ ಕಾರ್ಯದರ್ಶಿ ವಾಸುದೇವ ಭಟ್, ಆಯುರ್ವೇದ ಕಾಲೇಜಿನ ಮುಖ್ಯಸ್ಥ ರಾಧಕೃಷ್ಣ, ಡಾ. ಮಧುಕುಮಾರ್, ಪತಂಜಲಿ ಯೋಗಾ ಸಂಸ್ಥೆಯ ಶಶಿಕುಮಾರ್, ಅನಿಲ್ ಕುಮಾರ್, ಪ್ರಭಾಕರ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಚಾಮರಾಜ ಕ್ಷೇತ್ರದ ಯುವ ಅಧ್ಯಕ್ಷ ಸಚಿನ್, ಪಣೀಶ್, ಸ್ವಾತಿ ಇನ್ನಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!