ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಎಲ್ಲೆಡೆ ಚೌತಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಬಾರಿ ಗೌರಿ ಗಣೇಶ ಹಬ್ಬ ಒಂದೇ ದಿನ ಬಂದಿರುವುದರಿಂದ ರಾಜಧಾನಿ ಬೆಂಗಳೂರಿನಲ್ಲಿ ಹಬ್ಬ ಕಳೆಕಟ್ಟಿದೆ. ಅದರಲ್ಲೂ ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಜನಸಾಗರವೇ ಹರಿದುಬಂದಿದ್ದು, ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯುತ್ತಿದೆ. ಹೂವು, ಹಣ್ಣು ಹಾಗೂ ಗಣಪನ ಮೂರ್ತಿಗಳ ದರ ಗಗನಕ್ಕೇರಿದ್ದರೂ ಸಾರ್ವಜನಿಕರು ಯಾವುದಕ್ಕೂ ಕಮ್ಮಿ ಮಾಡದೆ ಸಕಲ ಸಿದ್ಧತೆಗಳಲ್ಲಿ ಮುಳುಗಿದ್ದಾರೆ.
ಹಬ್ಬದ ನಡುವೆ ಬೆಲೆ ಏರಿಕೆಯ ಬಿಸಿ
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ದರ ದುಬಾರಿಯಾಗಿದೆ. ಆದರೂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಗ್ರಾಹಕರು ಖರೀದಿಗೆ ಮುಗಿಬೀಳುತ್ತಿದ್ದಾರೆ.
ಹೂವುಗಳ ದರ
ಹಬ್ಬದ ಹಿನ್ನೆಲೆಯಲ್ಲಿ ಹೂವು ಹಾಗೂ ಅಲಂಕಾರಿಕ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಮಾರುಕಟ್ಟೆಯಲ್ಲಿ ದರ ಗಗನಕ್ಕೇರಿದೆ. ಸೇವಂತಿ ಪ್ರತಿ ಕೆ.ಜಿ 350 ರೂ., ಆದರೆ, ಗುಲಾಬಿ (ಬಟನ್) ಪ್ರತಿ ಕೆ.ಜಿ 350 ರೂ., ಕನಕಾಂಬರ ಪ್ರತಿ ಕೆ.ಜಿ 2,000 ರೂ., ಮಲ್ಲಿಗೆ ಪ್ರತಿ ಕೆ.ಜಿ 1,000 ರೂ., ಮಿಕ್ಸ್ ಹೂವು ಪ್ರತಿ ಕೆ.ಜಿ 300 ರಿಂದ 400 ರೂ., ತಾವರೆ ಹೂವು ಜೋಡಿಗೆ 50 ರೂ., ತುಳಸಿ ತೋರಣ 60 ರೂ., ಬಾಳೆ ದಿಂಡು ಜೋಡಿ50 ರಿಂದ 80 ರೂ., ಮಾವಿನ ಎಲೆ ಒಂದು ಕಟ್ಟಿಗೆ 10 ರಿಂದ 30ರೂ. ರವರೆಗೆ ಮಾರಾಟವಾಗುತ್ತಿದ್ದು, ಬೆಲೆ ಏರಿಕೆಯ ಬಿಸಿ ಇದ್ದರೂ ಗ್ರಾಹಕರು ಹಬ್ಬದ ಸಡಗರಕ್ಕಾಗಿ ಖರೀದಿಯಲ್ಲಿ ನಿರತರಾಗಿದ್ದಾರೆ.
ಹಣ್ಣುಗಳ ಬೆಲೆ
ಮಾರುಕಟ್ಟೆಯಲ್ಲಿ ಹಣ್ಣುಗಳ ದರ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಬ್ಬದ ಸಡಗರದ ನಡುವೆಯೂ ಪ್ರತಿ ಕೆ.ಜಿ ಸೇಬಿನ ಬೆಲೆ 200 ರಿಂದ 300 ರೂ. ರವರೆಗೆ ಮಾರಾಟವಾಗುತ್ತಿದ್ದರೆ, ದಾಳಿಂಬೆ 100 ರಿಂದ 250 ಕ್ಕೆ ಏರಿಕೆಯಾಗಿದೆ. ಇನ್ನುಳಿದಂತೆ ಸಪೋಟ 150 ರಿಂದ 200, ದ್ರಾಕ್ಷಿ 120 ರಿಂದ 150 ಹಾಗೂ ಸದಾ ಬೇಡಿಕೆಯಲ್ಲಿರುವ ಏಲಕ್ಕಿ ಬಾಳೆಹಣ್ಣು ಪ್ರತಿ ಕೆ.ಜಿಗೆ 80 ರಿಂದ 150 ರ ದರದಲ್ಲಿ ಗ್ರಾಹಕರ ಕೈಸೇರುತ್ತಿದೆ. ಮೂಸಂಬಿ ಮತ್ತು ಕಿತ್ತಳೆ ಹಣ್ಣುಗಳು ಸಹ ಪ್ರತಿ ಕೆ.ಜಿಗೆ 80 ರಿಂದ 100 ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದು, ಬೆಲೆ ಎಷ್ಟೇ ದುಬಾರಿಯಾಗಿದ್ದರೂ ಸಾರ್ವಜನಿಕರು ಹಬ್ಬದ ಆಚರಣೆಗಾಗಿ ಖರೀದಿಯನ್ನು ಮುಂದುವರಿಸಿದ್ದಾರೆ.
ಟ್ರಾಫಿಕ್ ಜ್ಯಾಮ್
ಮಾರ್ಕೆಟ್ ಆಸುಪಾಸಿನ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳು ಹಾಗೂ ಸರಕು ಸಾಗಣೆ ವಾಹನಗಳು ಹೆಚ್ಚಾಗಿರುವುದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಟ್ರಾಫಿಕ್ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಹರಸಾಹಸ ಪಡುತ್ತಿದ್ದಾರೆ.



