ಇವಿಎಂ- ವಿವಿಪ್ಯಾಟ್ ಮತಗಳ ಪರಿಶೀಲನೆಯ ವಿಚಾರಣೆ ಮುಕ್ತಾಯ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣೆಯಲ್ಲಿ ಮತ ಎಣಿಕೆ ವೇಳೆ ಇವಿಎಂ ಮತ್ತು ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕು (EVM VVPAT vote verification) ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಪೂರ್ಣಗೊಳಿಸಿದೆ. ಆದ್ರೆ ಇನ್ನೂ ತೀರ್ಪನ್ನು ಕಾಯ್ದಿರಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಗೆ ಸಂಬಂಧಿಸಿದ ಐದು ಪ್ರಶ್ನೆಗಳಿಗೆ ಚುನಾವಣಾ ಆಯೋಗದ ಅಧಿಕಾರಿಯಿಂದ ಉತ್ತರಗಳನ್ನು ಪಡೆದ ನಂತರ ತೀರ್ಪನ್ನು ಕಾಯ್ದಿರಿಸಿತು.

ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಜೊತೆಗೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಬಳಸಿ ಚಲಾವಣೆಯಾದ ಮತಗಳ ಸಂಪೂರ್ಣ ಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಹೇಳಿಕೆಯನ್ನು ನೀಡಿದೆ. ಇವಿಎಂ ಬಗ್ಗೆ ಇದ್ದ ಅನುಮಾನಗಳನ್ನು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣವಾಗಿ ಪರಿಹಾರ ಮಾಡಿದೆ. ಚುನಾವಣೆಗಳನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದೆ.

ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬದಲು ಹಿಂದಿನ ಬ್ಯಾಲಟ್ ಪೇಪರ್ ವೋಟಿಂಗ್ ವ್ಯವಸ್ಥೆ ಬಗ್ಗೆ ಜಡ್ಜ್​ಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗೆಯೇ, ವಿವಿಪ್ಯಾಟ್ ವಿಚಾರದಲ್ಲಿ ನ್ಯಾಯಾಧೀಶರು ಕಾಮೆಂಟ್ ಮಾಡಿದ್ದು, ಚುನಾವಣೆ ನಡೆಸಲೆಂದು ಬೇರೆ ಸ್ವಾಯತ್ತ ಸಂಸ್ಥೆ ಇದೆ. ಚುನಾವಣೆಯನ್ನು ಕೋರ್ಟ್ ನಿಯಂತ್ರಿಸಲು ಆಗಲ್ಲ ಎಂದೂ ಹೇಳಿದ್ದಾರೆ.

ನಮ್ಮ ಅನುಮಾನಗಳನ್ನು ಇಸಿಐ ಬಗೆಹರಿಸಿದೆ. ನಿಮ್ಮ ಚಿಂತನೆಯ ಪ್ರಕ್ರಿಯೆಯನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ನಾವು ಅನುಮಾನದ ಆಧಾರದ ಮೇಲೆ ಆದೇಶವನ್ನು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ. ವಿಚಾರಣೆ ನಡೆಯುತ್ತಿರುವಂತೆಯೇ, ನ್ಯಾಯಮೂರ್ತಿ ಖನ್ನಾ ಅವರು, ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಆಧಾರದ ಮೇಲೆ ನಾವು ಅನುಮಾನಗಳನ್ನು ಬಗೆಹರಿಸಿಕೊಂಡಿದ್ದೇವೆ. ಇವಿಎಂ ವಿಚಾರವಾಗಿ ನಾವು 3-4 ಸ್ಪಷ್ಟೀಕರಣವನ್ನು ಕೇಳಲು ಮಾತ್ರ ಬಯಯಸಿದ್ದೇವೆ. ಈ ಮಾತನ್ನು ಹೇಳುವ ಮುನ್ನ ನಮಗೆ ಅನುಮಾನ ಪರಿಹಾರವಾಗಬೇಕು. ಆದ ಕಾರಣದಿಂದ ಕೆಲವೊಂದು ಸ್ಪಷ್ಟೀಕರಣವನ್ನು ನಾವು ಕೇಳಿದ್ದೆವು ಎಂದು ಕೋರ್ಟ್‌ ಹೇಳಿದೆ.

ವಿಚಾರಣೆ ಒಂದು ಹಂತದಲ್ಲಿ ನ್ಯಾಯಾಧೀಶರು ಪ್ರತಿಯೊಂದು ವಿವಿಪ್ಯಾಟ್ ಅನ್ನೂ ಪರಿಶೀಲನೆ ನಡೆಸಬೇಕೆಂಬ ವಾದವನ್ನು ಒಪ್ಪಲು ನಿರಾಕರಿಸಿದ್ದು, ಇವಿಎಂನಲ್ಲಿ ಚಲಾವಣೆಯಾದ ಪ್ರತಿಯೊಂದು ಮತಕ್ಕೂ ವಿವಿಪ್ಯಾಟ್ ಜನರೇಟ್ ಮಾಡಿ ಅದನ್ನು ಮತ ಪೆಟ್ಟಿಗೆಗೆ ಹಾಕಿ ಆ ಮತವನ್ನು ಎಣಿಸುವ ಕೆಲಸ ಸಾಧುವಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದರು. ಹಾಗೆಯೇ, ಒಂದು ಚಿಹ್ನೆಗೆ ಚಲಾಯಿಸಿದ ಮತ ಬೇರೆ ಚಿಹ್ನಗೆ ಹೋಗುವಂತೆ ಇವಿಎಂ ಅನ್ನು ತಿರುಚಿರುವ ಒಂದೇ ಘಟನೆ ವರದಿಯಾಗಿಲ್ಲ. ಎಣಿಕೆ ಆಗುವ ಶೇ. 5ರಷ್ಟು ವಿವಿಪ್ಯಾಟ್​ಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ ಅದನ್ನು ಎತ್ತಿ ತೋರಿಸಬಹುದಲ್ಲ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!