ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ತಮ್ಮ 66ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಅವರು ಸನ್ಮಾನ ಸ್ವೀಕರಿಸಲಿದ್ದಾರೆ.
ಎಚ್‌ಡಿಕೆ ಅವರ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಶುಭ ಹಾರೈಸಿದ್ದಾರೆ. “ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉಕ್ಕು ಮತ್ತು ಭಾರೀ ಕೈಗಾರಿಕೆಗಳಲ್ಲಿ ತಮ್ಮ ಕೆಲಸದ ಮೂಲಕ ಆತ್ಮನಿರ್ಭರತೆಯತ್ತ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತಿದ್ದೀರ. ಸಮಾಜ ಸೇವೆಯಲ್ಲಿ ನಿಮಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಸಿಗಲಿ” ಎಂದು ಹಾರೈಸಿದ್ದಾರೆ.
ಪ್ರಧಾನಿಯವರ ಈ ಹಾರೈಕೆಗೆ ಕುಮಾರಸ್ವಾಮಿ ಅವರು ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. “ಪ್ರಧಾನಿಯವರ ಶುಭಾಶೀರ್ವಾದದಿಂದ ನಾನು ಭಾವುಕನಾಗಿದ್ದೇನೆ. ಅವರ ಪಿತೃವಾತ್ಸಲ್ಯಕ್ಕೆ ನಾನು ಧನ್ಯನಾಗಿದ್ದೇನೆ. ಮಾನ್ಯ ಪ್ರಧಾನಿಗಳ ಚಿಂತನಶೀಲ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಮೇಲಿನ ನಂಬಿಕೆಗೆ ನಾನು ಚಿರಋಣಿ” ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದರೊಂದಿಗೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಸಹ ಶುಭಾಶಯ ಕೋರುತ್ತಿದ್ದಾರೆ.
ಜನ್ಮದಿನದ ಪ್ರಯುಕ್ತ ಕುಮಾರಸ್ವಾಮಿ ಅವರ ಇಂದಿನ ದಿನಚರಿ ಸಂಪೂರ್ಣವಾಗಿ ಕಾರ್ಯಕ್ರಮಗಳಿಂದ ತುಂಬಿದೆ:
ಬೆಳಗ್ಗೆಯೇ ಮಂಡ್ಯ ಜಿಲ್ಲೆಯ ಮದ್ದೂರಿಗೆ ಆಗಮಿಸಿದ ಎಚ್‌ಡಿಕೆ, ಟಿಬಿ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದರು.
ಮಂಡ್ಯದ ಜಯಚಾಮರಾಜ ಒಡೆಯರ್ (ಸಂಜಯ್) ವೃತ್ತದಲ್ಲಿ ನಡೆಯಲಿರುವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರ ನಂತರ ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಬಳಿಯೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳ ಬಳಿಕ ಮೈಸೂರಿಗೆ ಆಗಮಿಸಿ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಪೂಜೆ ಮುಗಿಸಿ ಮಂಡ್ಯದ ಮಳವಳ್ಳಿಗೆ ಹಿಂತಿರುಗಲಿರುವ ಅವರು, ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ ಅವರ 1066 ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

