ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕುರಿತು ರಾಜಸ್ಥಾನದಲ್ಲಿ ನಡೆಯುತ್ತಿರುವ ‘ನವ ಸಂಕಲ್ಪ ಚಿಂತನ ಶಿಬಿರ’ದ ಚಿಂತನ ಮಂಥನದಲ್ಲಿ ಎಲ್ಲ ಪ್ರಮುಖ ನಾಯಕರು ಭಾಗವಹಿಸುತ್ತಿದ್ದರೆ ಮತ್ತೊಂದೆಡೆ ಪಕ್ಷದ ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಪಂಜಾಬ್ ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಸುನೀಲ್ ಶನಿವಾರ ‘ಮನ್ ಕಿ ಬಾತ್’ ಎಂಬ ಶೀರ್ಷಿಕೆಯಡಿ ಫೇಸ್ ಬುಕ್ ಲೈವ್ ಬಂದು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದರು. ಸುನೀಲ್ ಮೇಲೆ ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಪಕ್ಷ ತೊರೆದಿದ್ದಾರೆ. ಸುನೀಲ್ ಜಾಖರ್ ಮೂರು ಬಾರಿ ಶಾಸಕರಾಗಿ ಮತ್ತು ಒಮ್ಮೆ ಸಂಸದರಾಗಿ ಗೆಲುವು ಸಾಧಿಸಿದ್ದರು.
ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದ ಸುನೀಲ್ ಸಿಎಂ ಅಭ್ಯರ್ಥಿಯಾಗಿಯೂ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕತ್ವ ದೆಹಲಿಯಲ್ಲಿ ಕುಳಿತು ಪಂಜಾಬ್ನಲ್ಲಿ ಪಕ್ಷವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಒಳ್ಳೆಯ ವ್ಯಕ್ತಿಯಾಗಿದ್ದು, ಪಕ್ಷದ ಸಿದ್ದಾಂತಗಳನ್ನು ಬಿಡುವುದಿಲ್ಲ ಎಂದು ಸೋನಿಯಾಗೆ ತಿಳಿಸಿದರು. ಸುನೀಲ್ ಅವರ ಟ್ವಿಟರ್ ಬಯೋದಿಂದ ಕಾಂಗ್ರೆಸ್ ಅನ್ನು ತೆಗೆದುಹಾಕಿದ್ದಾರೆ. ಕೊನೆಯಲ್ಲಿ ಕಾಂಗ್ರೆಸ್ಗೆ ಗುಡ್ ಲಕ್ ಜೊತೆಗೆ ಗುಡ್ ಬೈ ಹೇಳಿದ್ದಾರೆ.