ಮನಸ್ಸಿಗೆ ಶಾಂತಿ ಇಲ್ಲ, ಕಣ್ಣು ಉರಿ, ನಿದ್ದೆ ಬರೋದೇ ಇಲ್ಲ. ಇಷ್ಟು ವರ್ಷವಿಲ್ಲದ ತಲೆನೋವು ಈಗ ಕಾಡುತ್ತಿದೆ. ಯಾವ ವಿಷಯದಲ್ಲಿಯೂ ಇಂಟ್ರೆಸ್ಟ್ ಇಲ್ಲ, ಕಾನ್ಫಿಡೆನ್ಸ್ ಅಂತೂ ಇಲ್ವೇ ಇಲ್ಲ! ಇದೆಲ್ಲವೂ ಕಾಮನ್ ಅನಿಸಬಹುದು, ಇದಕ್ಕೆ ನೀವು ನೂರಾರು ಕಾರಣವನ್ನೂ ಕೊಡಬಹುದು. ಆದರೆ ಇದೆಲ್ಲದಕ್ಕೂ ನಮ್ಮ ಬಳಿ ಇರೋದು ಒಂದೇ ಉತ್ತರ. ಮೊಬೈಲ್!!
ಹೌದು, ಈ ಎಲ್ಲ ಸಮಸ್ಯೆಗಳ ಮೂಲ ಕಾರಣ ನಿಮ್ಮ ಮೊಬೈಲ್ ಹಾಗೂ ಅದರ ಅಧಿಕ ಬಳಕೆ. ಸ್ಮಾರ್ಟ್ ಫೋನ್ ಇಲ್ಲದ ಜೀವನವನ್ನು ಇಮ್ಯಾಜಿನ್ ಕೂಡ ಮಾಡೋಕೆ ಆಗೋದಿಲ್ಲ. ಜೀವನಕ್ಕೆ ಬೇಕಾದ ಹಾಗೂ ಬೇಡವಾದ ಪ್ರತಿ ವಿಷಯ ಮೊಬೈಲ್‌ನಲ್ಲಿ ಸಿಕ್ಕಿಬಿಡುತ್ತದೆ. ಹಲವಾರು ಬಾರಿ ಊರಿಂದ ಊರು ಬಿಟ್ಟು ಒಬ್ಬಂಟಿಯಾಗಿ ಇರುವವರು ಮೊಬೈಲ್‌ನ್ನೇ ಜೊತೆಗಾರರಂತೆ ಭಾವಿಸುತ್ತಾರೆ. ರೀಲ್ಸ್ ನೋಡೋದು, ಸೀರೀಸ್ ನೋಡೋದು, ಇಲ್ಲ ಸಲ್ಲದ ಇನ್ಫಾರ್ಮೇಷನ್ ಹುಡುಕೋದಕ್ಕಾಗಿ ಗಂಟೆಗಟ್ಟಲೆ ವೇಸ್ಟ್ ಮಾಡ್ತಾರೆ. ಇದು ಮಾಮೂಲಿ ಅನಿಸಿದ್ರೂ ನಿಮ್ಮ ಆರೋಗ್ಯದ ಮೇಲೆ ಅತಿಹೆಚ್ಚು ಪರಿಣಾಮ ಬೀರುತ್ತದೆ. ದೇಹದ ಒಂದು ಭಾಗವನ್ನೂ ಬಿಡದೇ ಪ್ರತಿಯೊಂದಕ್ಕೂ ಅಫೆಕ್ಟ್ ಮಾಡುತ್ತದೆ.
ಕುತ್ತಿಗೆಯ ಶೇಪ್ ಬದಲಾಗ್ತಿದೆ!
ನಿಧಾನಕ್ಕೆ ಜನರ ಕುತ್ತಿಗೆಯ ಶೇಪ್ ಬದಲಾಗುತ್ತಾ ಇದೆ. ಮೊಬೈಲ್ ನೋಡುವಾಗ ಕುತ್ತಿಗೆ ಬಗ್ಗಿಸಿಕೊಳ್ಳೋದು ಕಾಮನ್. ಆದರೆ ಇದೇ ಭಂಗಿಯಲ್ಲಿ ಗಂಟೆಗಟ್ಟಲೆ ಕೂತಾಗ ಸ್ನಾಯುಗಳ ಮೇಲೆ ಒತ್ತಡವಾಗುತ್ತದೆ. ಕತ್ತು ಹಾಗೂ ಕತ್ತಿನ ಚರ್ಮಕ್ಕೆ ಸಮಸ್ಯೆಯಾಗುತ್ತದೆ. ಬೆನ್ನ ಬಳಿ ಹಂಪ್ ಕೂಡ ಸೃಷ್ಟಿಯಾಗುತ್ತದೆ. ತಲೆಬುರುಡೆ ಹೆಚ್ಚೆಂದರೆ ಐದು ಕೆಜಿ ಇರಬಹುದು. ಮೊಬೈಲ್ ನೋಡೋಕೆ ತಲೆಯನ್ನು ಬಗ್ಗಿಸಿದಾಗ ಕುತ್ತಿಗೆಗೆ ಪ್ರೆಶರ್ ಬೀಳುತ್ತದೆ. ಈಗ ಎಲ್ಲವೂ ಒಕೆ, ಆದರೆ ಐದು-ಹತ್ತು ವರ್ಷಗಳ ನಂತರ ನಿಮ್ಮ ದೇಹ ಅಸಲಿ ಆಟ ಶುರು ಮಾಡುತ್ತದೆ!
ಕೈ-ಭುಜ ನೋವು
ಮೊಬೈಲ್ ಹೆಚ್ಚು ನೋಡೋರು ಅಥವಾ ಅದರಲ್ಲೇ ಹೆಚ್ಚು ಕೆಲಸ ಮಾಡುವವರಿಗೆ ಭುಜ ನೋವು ಕಾಮನ್. ಯಾಕೆ ಗೊತ್ತಾ? ನೀವು ಸ್ಕ್ರೋಲ್ ಅಥವಾ ಟೈಪ್ ಮಾಡೋದು ಅತಿಯಾದ್ರೆ ಮಣಿಕಟ್ಟು ಹಾಗೂ ಬೆರಳುಗಳ ಮೇಲೆ ಅತಿಯಾದ ಒತ್ತಡವಾಗುತ್ತದೆ. ಇದರ ಪ್ರೆಶರ್‌ನಿಂದ ಭುಜಗಳಲ್ಲಿಯೂ ನೋವಾಗುತ್ತದೆ.
ಕಣ್ಣುಗಳ ಕಥೆ ಕೇಳಲೇಬೇಡಿ
ಮೊಬೈಲ್‌ನ ಮುಖ್ಯ ಕೆಲಸ ಏನು? ಸಂವಹನ ಅಲ್ಲವಾ? ಜನರಿಗೆ ಕರೆ ಅಥವಾ ಮೆಸೇಜ್ ಮಾಡಿದ ನಂತರ ಅದನ್ನು ಎತ್ತಿ ಬದಿಗಿಡಿ. ಉಪಯೋಗಕ್ಕೆ ಬಾರದ ರೀಲ್ಸ್ ನೋಡೋದ್ರಿಂದ ಕಣ್ಣು ಸಂಕಟಪಡುತ್ತದೆ. ದೀರ್ಘಕಾಲ ನೋಡುತ್ತಿರುವುದರಿಂದ ಕಣ್ಣುಗಳಲ್ಲಿ ಆಯಾಸ, ಕಣ್ಣುಗಳ ಶುಷ್ಕವಾಗುವುದು, ತಾತ್ಕಾಲಿಕ ದೃಷ್ಟಿ ಅಸ್ಪಷ್ಟತೆ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಕಡಿಮೆ ಬೆಳಕಿನಲ್ಲಿ ನಿರಂತರವಾಗಿ ಸ್ಕ್ರೀನ್ ನೋಡುವುದು ಕಣ್ಣಿನ ಆಯಾಸವನ್ನು ಹೆಚ್ಚಿಸುತ್ತದೆ.
ಈ ಸಮಸ್ಯೆಗೆ ಪರಿಹಾರ ಇದೆಯಾ?
ಖಂಡಿತ ಇದೆ, ಫೋನ್‌ನ್ನು ಕಣ್ಣಿನ ಅಳತೆಗೆ ತಂದು ನೋಡಿ, ಇದರಿಂದ ಭುಜ, ಬೆನ್ನು, ಕುತ್ತಿಗೆಗೆ ಪ್ರೆಶರ್ ಆಗೋದಿಲ್ಲ. ಸ್ಕ್ರೀನ್ ನೋಡುವಾಗ ಯುವಿ ಪ್ರೊಟೆಕ್ಷನ್ ಗ್ಲಾಸ್ ಬಳಸಿ. ದೀರ್ಘಕಾಲ ಸ್ಕ್ರೀನ್ ನೋಡಲೇಬೇಕಾದ ಪರಿಸ್ಥಿತಿ ಬಂದಾಗ ಆಗಾಗ ಬ್ರೇಕ್ ತಗೊಳೋದು ಮರೆಯಬೇಡಿ.
ಕುಳಿತುಕೊಳ್ಳುವಾಗ ಆದಷ್ಟು ನೇರವಾಗಿರಿ. ಭುಜಗಳು ರಿಲ್ಯಾಕ್ಸ್ ಆಗಿರಲಿ. ಕುತ್ತಿಗೆ ಭುಜಗಳಿಗೆ ವ್ಯಾಯಾಮ ಮಾಡಿ. ಫೋನ್‌ನ್ನು ಆಗಾಗ ಕ್ಲೀನ್ ಮಾಡಿದ್ರೆ ಚರ್ಮ ಸಂಬಂಧಿ ರೋಗಗಳು ಬರೋದಿಲ್ಲ.
ಫೋನ್ ನೋಡದೇ ತಿನ್ನೋಕಾಗೋದಿಲ್ಲ, ಫೋನ್ ಇಲ್ಲದೆ ಬದುಕೋಕೆ ಆಗೋದಿಲ್ಲ, ಫೋನ್ ನನ್ನ ಸಂಗಾತಿ ಎನ್ನುವ ಭಾವನೆಯನ್ನು ತೆಗೆದುಹಾಕಿ. ಮಿತವಾಗಿ ಬಳಸಿ, ಯಾವುದೇ ಆಗಲಿ ಅತಿಯಾದ್ರೆ ವಿಷ ಎನ್ನೋದನ್ನು ಮರೆಯಬೇಡಿ. ಮನೆಯಿಂದ ಹೊರಗೆ ಹೋಗಿ ಪಾರ್ಕ್‌ನಲ್ಲಿ ನಾಲ್ಕು ಹೆಜ್ಜೆ ವಾಕಿಂಗ್ ಮಾಡಿ. ಜನರನ್ನು ಮಾತನಾಡಿಸಿ.



