ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಿನ್ನ ವಿಭಿನ್ನ ಫ್ಲೇವರ್‌ಗಳ ಹೆಸರಿನಲ್ಲಿ ಕಲರ್ ಕಲರ್ ಡೋನಟ್ ಮಕ್ಕಳಿಗೆ ಕೊಡಿಸ್ತೀರಾ? ಇದು ತಿನ್ನೋದಕ್ಕೆ ಯೋಗ್ಯ ಅಲ್ಲ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಹೇಳಿದೆ.
ಡೋನಟ್ ಗಳಲ್ಲಿ ಅತಿಯಾದ ಕೃತಕ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದು ಅನುಮೋದಿತ ಸುರಕ್ಷತಾ ಮಿತಿಗಳನ್ನು ಮೀರಿದೆ. ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ವೇಳೆ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರಿಶೀಲನೆ ವೇಳೆ ಡೋನಟ್ ಗಳಲ್ಲಿ ಅತಿಯಾದ ಕೃತಕ ಬಣ್ಣ ಬಳಕೆ ಮಾಡಿರುವುದು ಪತ್ತೆಯಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಕಾರ್ಯನಿರ್ವಹಿಸುತ್ತಿರುವ ಒಟ್ಟು 12 ಆಹಾರ ಮಳಿಗೆಗಳ ಆಹಾರ ಮಾದರಿಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ, ತಪಾಸಣೆಯ ವೇಳೆ ಎರಡು ಪ್ರಮುಖ ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ. ಪ್ಯಾಕೇಜ್ಡ್ ಕುಡಿಯುವ ನೀರಿನ ಕಂಪನಿ ಮತ್ತು ತುಪ್ಪ, ಸಿಹಿತಿಂಡಿಗಳು, ಫಾಸ್ಟ್ ಫುಡ್ ಮತ್ತು ಮಸಾಲೆ ಪುಡಿಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಆಹಾರ ಬ್ರ್ಯಾಂಡ್ ಕಂಪನಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.