ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಜನಪ್ರಿಯ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಗಂಡು ಮಗುವಿನ ಪೋಷಕರಾಗಿದ್ದ ಈ ದಂಪತಿ, ಇದೀಗ ತಮ್ಮ ಪುತ್ರನಿಗೆ ಅಧಿಕೃತವಾಗಿ ನಾಮಕರಣ ಮಾಡಿದ್ದು, ಮಗುವಿನ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
2025ರ ನವೆಂಬರ್ 7ರಂದು ಕತ್ರಿನಾ ಕೈಫ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಆ ಪುಟ್ಟ ಕಂದನಿಗೆ ‘ವಿಹಾನ್ ಕೌಶಲ್’ ಎಂದು ಹೆಸರಿಡಲಾಗಿದೆ. ಮಗುವಿನ ಪುಟ್ಟ ಕೈಯನ್ನು ದಂಪತಿಗಳು ಹಿಡಿದುಕೊಂಡಿರುವ ಸುಂದರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಹೆಸರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ತಮ್ಮ ಸಂತೋಷವನ್ನು ಹಂಚಿಕೊಂಡಿರುವ ದಂಪತಿ, “ನಮ್ಮ ಬದುಕಿನ ಬೆಳಕಿನ ಕಿರಣ ‘ವಿಹಾನ್ ಕೌಶಲ್’. ನಮ್ಮ ಪ್ರಾರ್ಥನೆಗಳು ಫಲಿಸಿವೆ, ಬದುಕು ಸುಂದರವಾಗಿದೆ. ನಮ್ಮ ಜೀವನವೇ ಬದಲಾಗಿದ್ದು, ಇದನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ವಿಕ್ಕಿ ಮತ್ತು ಕತ್ರಿನಾ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳಾದ ಪರಿಣೀತಿ ಚೋಪ್ರಾ, ಭೂಮಿ ಪೆಡ್ನೇಕರ್, ಸಿದ್ಧಾಂತ್ ಚತುರ್ವೇದಿ ಮತ್ತು ರಿಚಾ ಚಡ್ಡಾ ಸೇರಿದಂತೆ ಅನೇಕರು ನವಜಾತ ಶಿಶುವಿಗೆ ಹಾರೈಸಿದ್ದಾರೆ.
2021ರಲ್ಲಿ ವಿವಾಹವಾಗಿದ್ದ ಈ ಜೋಡಿ, ಬಾಲಿವುಡ್‌ನ ಯಶಸ್ವಿ ದಂಪತಿಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಪ್ರಸ್ತುತ 42 ವರ್ಷದ ಕತ್ರಿನಾ ಮತ್ತು 37 ವರ್ಷದ ವಿಕ್ಕಿ ಕೌಶಲ್ ಈಗ ಪೋಷಕತ್ವದ ಹೊಸ ಜವಾಬ್ದಾರಿಯನ್ನು ಸಂಭ್ರಮಿಸುತ್ತಿದ್ದಾರೆ. ಮದುವೆಯ ನಂತರ ಕತ್ರಿನಾ ಕೈಫ್ ಸಿನಿಮಾಗಳಿಂದ ಸ್ವಲ್ಪ ದೂರವಿದ್ದು, ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ.

