ಕೊಡಗಿನಿಂದ ಇಬ್ಬರ ಗಡಿಪಾರು: ಹಿಂದು ಸಂಘಟನೆಗಳಿಂದ ಪ್ರತಿಭಟನೆ

ಹೊಸದಿಗಂತ ವರದಿ, ಮಡಿಕೇರಿ:

ಹಿಂದೂ ಸಂಘಟನೆಗಳ ಇಬ್ಬರು ಪ್ರಮುಖರನ್ನು ಕೊಡಗಿನಿಂದ ಗಡಿಪಾರು ಮಾಡುವ ಕುರಿತು ಉಪವಿಭಾಗಾಧಿಕಾರಿಗಳ ನ್ಯಾಯಾಲಯದಿಂದ ಸಂಬಂಧಿಸಿದ ಆರೋಪಿಗಳಿಗೆ ಹೇಳಿಕೆ ನೀಡುವಂತೆ ನೋಟೀಸ್ ನೀಡಿರುವ ಕ್ರಮವನ್ನು ಖಂಡಿಸಿ ಹಿಂದು ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಗಡಿಪಾರಿನ ಪ್ರಸ್ತಾಪವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ನಾಮನಿರ್ದೇಶಿತ ಸದಸ್ಯ ಹಾಗೂ ಹಿಂದೂ ಸಂಘಟನೆಯ ಪ್ರಮುಖ ಕವನ್ ಕಾವೇರಪ್ಪ ಮತ್ತು ಅಶಾಂತಿ ಸೃಷ್ಟಿಸುವ ಆರೋಪದಡಿ ಹಿಂದೂ ಜಾಗರಣಾ ವೇದಿಕೆಯ ಹಿಂದೂ ವಾಹಿನಿಯ ಜಿಲ್ಲಾ ಸಂಚಾಲಕ್ ವಿನಯ್ ಕುಮಾರ್ ಅವರುಗಳನ್ನು ಗಡಿಪಾರು ಮಾಡುವ ಕುರಿತು ಪ್ರಸ್ತಾಪಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇವರಿಬ್ಬರು ಯಾವುದೇ ಗಂಭೀರ ಆರೋಪಗಳನ್ನು ಎದುರಿಸದಿದ್ದರೂ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ ದೇಶಭಕ್ತ ಸಂಘಟನೆಯಲ್ಲಿರುವವರ ವಿರುದ್ಧ ಗಡಿಪಾರಿನಂತಹ ಕ್ರಮಕ್ಕೆ ಮುಂದಾಗಿರುವುದು ವಿಷಾದಕರವೆಂದರು.
ಗಡಿಪಾರಿನ ಪ್ರಸ್ತಾಪವನ್ನು ಕೈಬಿಡದಿದ್ದಲ್ಲಿ ಜಿಲ್ಲೆಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಸಹ ಸಂಚಾಲಕ ಚೇತನ್, ಪ್ರಮುಖರಾದ ಸುನಿಲ್ ಮಾದಾಪುರ, ವೀರಾಜಪೇಟೆ ತಾಲೂಕು ಸಂಚಾಲಕ ಅನಿಲ್, ಯೋಗೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರಸಭಾ ಬಿಜೆಪಿ ಸದಸ್ಯರುಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!