ರಾಜ್ಯ ಸರ್ಕಾರ ಜನರಿಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ: ಮಾಜಿ ಸಚಿವ ಸುನೀಲ್​ ಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉಚಿತ ಯೋಜನೆಗಳ ಜಾರಿಯ ಭರಾಟೆಯಲ್ಲಿ ಮುಳುಗಿರುವ ರಾಜ್ಯ ಸರ್ಕಾರವು ಜನತೆಗೆ ಕತ್ತಲೆ ಭಾಗ್ಯ ನೀಡುವುದು ಗ್ಯಾರಂಟಿ ಎಂದು ಮಾಜಿ ಸಚಿವ ಸುನೀಲ್​ ಕುಮಾರ್ ಟೀಕಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಚಿವರು ಈ ಕುರಿತು ಟ್ವೀಟ್​ ಮಾಡಿದ್ದು, ಉಚಿತ ಎಂಬ ನಿಮ್ಮ ಭಾಷಣದ ಭರಾಟೆಗೆ ಮರುಳಾದ ಜನರಿಗೆ ಈಗ ಕತ್ತಲೆ ಖಚಿತವೆಂದು ಅರ್ಥವಾಗಿದೆ. ಸಾಲ ನಿಶ್ಚಿತ, ಬೆಲೆ ಏರಿಕೆಯೂ ಖಂಡಿತ ಎಂಬುದು ತಿಂಗಳು ಕಳೆಯುವಷ್ಟರಲ್ಲೇ ಸಾರ್ವಜನಿಕರಿಗೆ ಅರ್ಥವಾಗಿದೆ ಎಂದಿದ್ದಾರೆ.

ಈ ಹಿಂದೆ ರೈತರ ಐಪಿ ಸೆಟ್​​ಗಳಿಗೆ ನಿರಂತರ ಏಳು ಗಂಟೆಗಳ ಕಾಲ ಪೂರೈಕೆ ಮಾಡುತ್ತಿದ್ದ ವಿದ್ಯುತ್​ನ್ನು ಕಡಿತಗೊಳಿಸಲಾಗಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನಿಯಮಿತ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ. ನಿರ್ವಹಣೆ ಹೆಸರಿನಲ್ಲಿ ಪವರ್ ಕಟ್ ಮಾಡಿ ಕಣ್ಣಾಮುಚ್ಚಾಲೆ ನಡೆಸುತ್ತಿರುವುದು ಸುಳ್ಳೇ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರೇ ವ್ಯವಸ್ಥೆಯನ್ನು ಎತ್ತ ಕೊಂಡೊಯ್ಯುತ್ತಿದ್ದೀರಿ? ನಿಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಜಾಹೀರಾತು ಕೊಟ್ಟ ಮಾತ್ರಕ್ಕೆ ಕತ್ತಲೆ ಕಳೆಯಲು ಸಾಧ್ಯವೇ? ನೀವು ಘೋಷಿಸದೆ ಮಾಡುತ್ತಿರುವ ಲೋಡ್ ಶೆಡ್ಡಿಂಗ್​ನಿಂದಾಗಿ ಕೃಷಿ ಮತ್ತು ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕುಂಠಿತಗೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

https://twitter.com/karkalasunil/status/1669235530276405248?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!