ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಬಿಜೆಪಿ ಮಾಜಿ ಸಚಿವ ಮನೋರಂಜನ್ ಕಾಲಿಯಾ ಅವರ ನಿವಾಸದ ಹೊರಗೆ ಮಂಗಳವಾರ ಬೆಳಗಿನ ಜಾವ ಸ್ಫೋಟ ಸಂಭವಿಸಿದೆ. ಇದೀಗ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ಕಾಲಿಯಾ ಅವರ ಮನೆಯ ಮೇಲೆ ನಡೆದ ಗ್ರೆನೇಡ್ ದಾಳಿಯ ಸಂಚುಕೋರ ಜೀಶನ್ ಅಖ್ತರ್ ಎಂಬಾತನನ್ನು ಬಂಧಿಸಲಾಗಿದೆ.
ಆತ ಬಿಷ್ಣೋಯ್ ಗ್ಯಾಂಗ್ ಜೊತೆ ನಂಟು ಹೊಂದಿದ್ದಾನೆ ಎಂದು ಹೇಳಲಾಗಿದೆ. ಜೀಶನ್ ಅಖ್ತರ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಚರ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬೇಕಾಗಿರುವ ಆರೋಪಿ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಐಎಸ್‌ಐ ಪಂಜಾಬ್‌ನಲ್ಲಿ ಧಾರ್ಮಿಕ ಸಾಮರಸ್ಯವನ್ನು ಕದಡಲು ಸಂಚು ರೂಪಿಸಿದೆ. ಬಿಜೆಪಿ ನಾಯಕನ ವಿರುದ್ಧದ ದಾಳಿಯನ್ನು ಗಡಿಯಾಚೆಯಿಂದ ಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಪಂಜಾಬ್ ಸಚಿವ ಮೊಹಿಂದರ್ ಭಗತ್ ಕೂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಮಾಜಿ ಸಚಿವ ಮತ್ತು ಮಾಜಿ ರಾಜ್ಯ ಬಿಜೆಪಿ ಮುಖ್ಯಸ್ಥರೂ ಆಗಿದ್ದ ಕಾಲಿಯಾ ಅವರ ಮನೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಸ್ಫೋಟದಲ್ಲಿ ಗೋಡೆಗೆ ಹಾನಿಯಾಗಿತ್ತು. ಅವರ ಮನೆ ಮತ್ತು ವಾಹನಗಳ ಗಾಜಿನ ಕಿಟಕಿಗಳು ಪುಡಿಪುಡಿಯಾಗಿದ್ದವು. ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಆ ಸಮಯದಲ್ಲಿ ಬಿಜೆಪಿ ಮುಖಂಡರೂ ಮನೆಯಲ್ಲಿದ್ದರು.ಗ್ರೆನೇಡ್ ಎಸೆದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದ್ದು, ದಾಳಿಗೆ ಬಳಸಲಾದ ಇ-ರಿಕ್ಷಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.