ಹೊಸದಿಗಂತ ಡಿಜಿಟಲ್ ಡೆಸ್ಕ್ :
ಡೈರಿ ಫಾರ್ಮ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಅದರಲ್ಲಿದ್ದ ಬರೋಬ್ಬರಿ 18 ಸಾವಿರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವ ಭೀಕರ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ.
ಡೈರಿಯಲ್ಲಿ ಸ್ಫೋಟವಾದ ಬೆನ್ನಲ್ಲೇ, ಬೆಂಕಿ ಹೊತ್ತಿ ಉರಿದಿದೆ. ಘಟನೆಯಲ್ಲಿ ಅನೇಕ ಹಸುಗಳು ಸಜೀವ ದಹನಗೊಂಡಿವೆ. ಇನ್ನೂ ಅನೇಕ ಹಸುಗಳು ಉಸಿರುಗಟ್ಟಿ ಮೃತಪಟ್ಟಿವೆ. ಆದರೆ ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಡೈರಿಯ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಫೋಟೋಗಳು ಹರಿದಾಡಿವೆ. ಸ್ಫೋಟದ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿ ಉದ್ಭವವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದು, ಫಾರ್ಮ್‌ನಲ್ಲಿ ಸಿಲುಕಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಸಾರ್ವಜನಿಕರ ಸುರಕ್ಷತೆಗಾಗಿ ಫಾರ್ಮ್‌ನ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಅಮೆರಿಕದಲ್ಲಿ ಜಾನುವಾರುಗಳ ಕೊಟ್ಟಿಗೆಗಳಲ್ಲಿ ಬೆಂಕಿ ದುರಂತಗಳು ನಡೆದಿರುವುದು ಇದು ಮೊದಲೇನಲ್ಲ. ಆದರೆ ಟೆಕ್ಸಾಸ್‌ನಲ್ಲಿ ನಡೆದ ಸ್ಫೋಟವು ಅಮೆರಿಕದ ಡೈರಿ ಫಾರ್ಮ್‌ನಲ್ಲಿ ನಡೆದಿರುವ ಅತ್ಯಂತ ಭೀಕರ ಘಟನೆ ಎನಿಸಿಕೊಂಡಿದೆ.