Friday, September 22, 2023

Latest Posts

ಎರಡು ವರ್ಷಗಳಲ್ಲಿ 1,240.6 ಮಿಲಿಯನ್ ಡಾಲರ್ ಆಯುಷ್, ಗಿಡಮೂಲಿಕೆ ಉತ್ಪನ್ನಗಳ ರಫ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎರಡು ವರ್ಷಗಳಲ್ಲಿ (2021-2022 ರಿಂದ 2022-23)ಒಟ್ಟು 1,240.6 ಮಿಲಿಯನ್ ಡಾಲರ್ ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳನ್ನು ಭಾರತವು ರಫ್ತು ಮಾಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಆಯುಷ್ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ರಾಜ್ಯಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ನೀಡಿದ್ದು, 2021-2022ನೇ ಸಾಲಿನಲ್ಲಿ ಒಟ್ಟು 612.1 ಮಿಲಿಯನ್ ಡಾಲರ್ ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳನ್ನು ರಫ್ತು ಮಾಡಲಾಗಿತ್ತು. 2022-2023ನೇ ಸಾಲಿನಲ್ಲಿ 628.25 ಮಿಲಿಯನ್ ಡಾಲರ್ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಎಕ್ಸಿಂ ಬ್ಯಾಂಕ್ ಒದಗಿಸಿರುವ ಮಾಹಿತಿಯನ್ನು ಉಲ್ಲೇಖಿಸಿದ ಸಚಿವರು, ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳನ್ನು ಮಾತ್ರೆಗಳು, ಪೌಡರ್, ಜೆಲ್, ತುಪ್ಪ, ಪೇಸ್ಟ್, ಪಿಲ್ ಗಳು, ಕಣ್ಣು ಹಾಗೂ ಮೂಗಿನ ಡ್ರಾಪ್ ಗಳು, ಬಾಡಿ ಲೋಷನ್ಸ್, ಚರ್ಮ ಹಾಗೂ ಕೂದಲಿನ ಸಂರಕ್ಷಣಾ ಉತ್ಪನ್ನಗಳು ಸೇರಿದಂತೆ ವಿವಿಧ ರೂಪದಲ್ಲಿ ರಫ್ತು ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ಭವಿಷ್ಯದಲ್ಲಿ ಆಯುರ್ವೇದಿಕ್ ಔಷಧಗಳ ರಫ್ತು ಹೆಚ್ಚಿಸಲು ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳು ಹಾಗೂ ಪ್ರಸ್ತಾವನೆ ಕುರಿತು ಮಾಹಿತಿ ನೀಡಿದ ಅವರು, ಇನ್ನು ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳ ರಫ್ತು ಹೆಚ್ಚಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದ್ದಾರೆ.

‘ಆಯುಷ್ ಗೆ ಅಂತಾರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಸೆಂಟ್ರಲ್ ಸೆಕ್ಟರ್ ಸ್ಕೀಮ್ ವೊಂದನ್ನು ಅಭಿವೃದ್ಧಿಪಡಿಸಿದೆ. ಅದರಡಿಯಲ್ಲಿ ಆಯುಷ್ ಸಚಿವಾಲಯವು ಔಷಧ ಉತ್ಪಾದನೆ, ಉದ್ಯಮ, ಆಯುಷ್ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜನ ಸಿಗುವಂತೆ ಮಾಡಲು ಅಂತಾರಾಷ್ಟ್ರೀಯ ಪ್ರದರ್ಶನಗಳು, ವ್ಯಾಪಾರ ಮೇಳಗಳು ಹಾಗೂ ರೋಡ್ ಶೋಗಳಲ್ಲಿ ಪಾಲ್ಗೊಳ್ಳಲು ಸಹಾಯಧನವನ್ನು ಒದಗಿಸುತ್ತಿದೆ. ಹಾಗೆಯೇ ರಫ್ತು ಮಾಡಲು ವಿವಿಧ ರಾಷ್ಟ್ರಗಳ ನಿಯಂತ್ರಣ ಪ್ರಾಧಿಕಾರಗಳಲ್ಲಿ ಆಯುಷ್ ಉತ್ಪನ್ನಗಳನ್ನು ನೋಂದಣಿ ಮಾಡಿಸಲು ಕೂಡ ಸಹಾಯಧನವನ್ನು ನೀಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿಪಡಿಸಲು ಕೂಡ ಆಯುಷ್ ಉತ್ಪನ್ನಗಳ ಉತ್ಪಾದನಾ ಕಂಪನಿಗಳಿಗೆ ಸರ್ಕಾರ ನೆರವು ನೀಡುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಆಯುಷ್ ಸಚಿವಾಲಯವು ದೇಶ-ದೇಶದ ನಡುವಿನ 24 ಎಂಯುಎಸ್ ಗೆ ( MoUs) ಸಹಿ ಮಾಡಿದೆ. 46 ಸಂಸ್ಥೆಗಳ ಮಟ್ಟದ MoUs,15 ಚೇರ್ MoUs ಆಗಿವೆ. ಇನ್ನು ಆಯುಷ್ ಹಾಗೂ ಗಿಡಮೂಲಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು 35 ರಾಷ್ಟ್ರಗಳಲ್ಲಿ 39 ಆಯುಷ್ ಮಾಹಿತಿ ಸೆಲ್ ಗಳನ್ನು ಸ್ಥಾಪಿಸಲಾಗಿದೆ ಎಂದು ಸೋನೋವಾಲ್ ತಿಳಿಸಿದ್ದಾರೆ.

‘ಜಿ20, ಎಸ್ ಸಿಒ ಹಾಗೂ ಏಷಿಯನ್ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ರಾಷ್ಟ್ರಗಳ ಜೊತೆಗೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಒಪ್ಪಂದಗಳನ್ನು ಏರ್ಪಡಿಸಲು ವಾಣಿಜ್ಯ ಇಲಾಖೆ, ಔಷಧೀಯ ಇಲಾಖೆ ಹಾಗೂ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಸೇರಿದಂತೆ ಆಯುಷ್ ಸಚಿವಾಲಯ ಹಾಗೂ ಇತರ ಸಚಿವಾಲಯಗಳು ನೆರವು ನೀಡುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!