‘ಮದ್ಯ’ ನೆಪದಲ್ಲಿ ರಸ್ತೆ ಮಧ್ಯೆಯೇ ಪೊಲೀಸರಿಂದ ಸುಲಿಗೆ?

ಹೊಸದಿಗಂತ ವರದಿ,ಬೆಂಗಳೂರು:

ಮದ್ಯಪಾನ ತಪಾಸಣೆಯ ವೇಳೆ ಮಹಿಳೆಯೊಬ್ಬರಿಗೆ ಕುಡಿದು ವಾಹನ ಚಲಾಯಿಸುತ್ತಿರುವ ಆರೋಪ ಆನ್‌ಲೈನ್ ಮೂಲಕ ಐದು ಸಾವಿರ ರೂ. ಹಣವನ್ನು ಸುಲಿಗೆ ಮಾಡಿರುವ ಆರೋಪ ಜೀವನ್ ಭೀಮಾನಗರದ ಸಂಚಾರ ಠಾಣೆ ಪೊಲೀಸರ ವಿರುದ್ಧ ಕೇಳಿಬಂದಿದೆ.

ಈ ಕುರಿತು ಯುವತಿಯ ತಂದೆ ಕೋಶಿ ವರ್ಗೀಸ್ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಘಟನೆಯ ಬಗ್ಗೆ ಸಂಪೂರ್ಣ ವಿವರಗಳನ್ನು ಬರೆದು ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?:

ಫೆ.23ರಂದು ತಡರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಪುತ್ರಿ ದ್ವಿಚಕ್ರ ವಾಹನದಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಗುತ್ತಿದ್ದರು. ಅದೇ ವೇಳೆ ಮಣಿಪಾಲ್ ಆಸ್ಪತ್ರೆ ಸಮೀಪದಲ್ಲಿ ಮದ್ಯಪಾನ ವಾಹನ ತಪಾಸಣೆ ನಡೆಸುತ್ತಿದ್ದ ಜೀವನ್ ಭೀಮಾನಗರ ಸಂಚಾರ ಠಾಣೆ ಪೊಲೀಸರು, ಆಕೆಯನ್ನು ತಡೆದಿದ್ದಾರೆ. ಬಳಿಕ ಮದ್ಯ ಸೇವಿಸಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಆಕೆ ಇಲ್ಲ ಎಂದಾಗ, ಮದ್ಯ ಸೇವನೆ ಪರೀಕ್ಷೆಯೂ ನಡೆಸದೆಯೇ, ನೀನು ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಕೂಡಲೇ ನೀನು 15 ಸಾವಿರ ರೂ ದಂಡ ಪಾವತಿಸಬೇಕು. ದಂಡ ಪಾವತಿಯಾದರೆ ಮಾತ್ರ ಬಿಟ್ಟು ಕಳುಹಿಸುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾರೆ. ಹಲವು ಮಾತುಗಳ ನಂತರ ಅಂತಿಮವಾಗಿ 5 ಸಾವಿರ ರೂ.ಗಳನ್ನು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಗೂಗಲ್ ಪೇ ಮೂಲಕ ಹಣ ಪಾವತಿಸಿಕೊಂಡಿದ್ದಾರೆ ಎಂದು ಯುವತಿಯ ತಂದೆ ಕೋಶಿ ವರ್ಗಿಸ್ ಆರೋಪಿಸಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ವಿಭಾಗ ಹಾಗೂ ಜೀವನ್ ಭೀಮಾನಗರ ಸಂಚಾರ ಠಾಣೆ ಪೊಲೀಸರು, 5 ಸಾವಿರ ರೂ ಹಣವನ್ನು ನಿಮ್ಮ ಪುತ್ರಿ ಗೂಗಲ್ ಪೇ ಮೂಲಕ ವರ್ಗಾಹಿಸಿಕೊಂಡ ಮೊಬೈಲ್ ನಂಬರ್ ಹಾಗೂ ಹಣ ವರ್ಗಾಯಿಸಿರುವ ಯುಪಿಐ ವಿವರಗಳನ್ನು ಕಳುಹಿಸುವುದಾಗಿ ಕೋರಿದ್ದಾರೆ. ಅದನ್ನು ದೂರುದಾರರು ಪೊಲೀಸರಿಗೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಈ ಕುರಿತು ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾತನಾಡಿ, ಎಕ್ಸ್‌ ಖಾತೆಯಲ್ಲಿ ವ್ಯಕ್ತಿಯೊಬ್ಬರು ಜೆ. ಬಿ. ನಗರ ಸಂಚಾರ ಠಾಣೆ ಸಿಬ್ಬಂದಿ ವಿರುದ್ಧಲಂಚ ಸ್ವೀಕರಿಸಿರುವ ಸಂಬಂಧ ವಿವರಗಳನ್ನು ಬರೆದು ಟ್ಯಾಗ್ ಮಾಡಿದ್ದಾರೆ. ಈ ಸಂಬಂಧ ಪೂರ್ವ ಸಂಚಾರ ಉಪವಿಭಾಗದ ಎಸಿಪಿಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!