September 30, 2026
Wednesday, September 30, 2026
spot_img

ಫಹಾದ್ ಕ್ರೇಜ್ ಕೊರೊನಾಗಿಂತ ಸ್ಪೀಡ್! ಫಹಾದ್ ಫಾಸಿಲ್ ನಟನೆಗೆ ರಾಜಮೌಳಿ ಫುಲ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ಮಲಯಾಳಂನ ಬಹುಮುಖ ಪ್ರತಿಭೆ ಫಹಾದ್ ಫಾಸಿಲ್, ಇದೀಗ ಟಾಲಿವುಡ್‌ನಲ್ಲೂ ಭಾರಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಅವರ ಬಹುನಿರೀಕ್ಷಿತ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಈ ಸಮಾರಂಭಕ್ಕೆ ಭಾರತೀಯ ಚಿತ್ರರಂಗದ ದಿಗ್ಗಜ ನಿರ್ದೇಶಕ ಎಸ್. ಎಸ್. ರಾಜಮೌಳಿ ಮುಖ್ಯ ಅತಿಥಿಯಾಗಿ ಆಗಮಿಸಿ, ಫಹಾದ್ ಫಾಸಿಲ್ ಅವರ ನಟನಾ ಕೌಶಲ ಹಾಗೂ ಅವರ ಅಪಾರ ಜನಪ್ರಿಯತೆಯನ್ನು ಮುಕ್ತಕಂಠದಿಂದ ಹೊಗಳಿ ಪ್ರೇಕ್ಷಕರ ಗಮನ ಸೆಳೆದರು.

ವೇದಿಕೆಯ ಮೇಲೆ ಮಾತನಾಡಿದ ರಾಜಮೌಳಿ, ತಾವು ಫಹಾದ್ ಅವರ ನಟನೆಗೆ ದೊಡ್ಡ ಅಭಿಮಾನಿ ಎಂಬುದನ್ನು ಹೆಮ್ಮೆಯಿಂದ ಹೇಳಿದರು. ಒಟಿಟಿಯಲ್ಲಿ ಫಹಾದ್ ಅವರ ಹಲವು ಸಿನಿಮಾಗಳನ್ನು ವೀಕ್ಷಿಸಿದ್ದಾಗಿ ತಿಳಿಸಿದ ಅವರು, “ಆರಂಭದಲ್ಲಿ ಫಹಾದ್ ಸಿನಿಮಾಗಳು ಕೇವಲ ‘ಕ್ಲಾಸ್’ ಪ್ರೇಕ್ಷಕರಿಗೆ ಅಥವಾ ನಿರ್ದಿಷ್ಟ ವರ್ಗದ ಜನರಿಗೆ ಮಾತ್ರ ಸೀಮಿತವಾಗಿರಬಹುದು ಎಂದು ಭಾವಿಸಿದ್ದೆ” ಎಂದು ಸತ್ಯ ಒಪ್ಪಿಕೊಂಡರು.

ಇದೇ ವೇಳೆ 6-7 ವರ್ಷಗಳ ಹಿಂದೆ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ನೆನಪಿಸಿಕೊಂಡ ಜಕ್ಕಣ್ಣ, “ನನ್ನ ಹೆಂಡತಿಯ ಕಸಿನ್ ಒಬ್ಬರು ಒಮ್ಮೆ ನನ್ನ ಬಳಿ ಬಂದು ‘ನೀವು ಫಫಾ ಸಿನಿಮಾಗಳನ್ನು ನೋಡಿದ್ದೀರಾ?’ ಎಂದು ಕೇಳಿದರು. ಆ ಸಮಯದಲ್ಲಿ ನನಗೆ ‘ಫಫಾ’ ಎಂದರೆ ಯಾರೆಂದೇ ತಿಳಿದಿರಲಿಲ್ಲ. ಆಮೇಲೆ ವಿಚಾರಿಸಿದಾಗ ಅದು ಫಹಾದ್ ಫಾಸಿಲ್ ಎಂದು ಗೊತ್ತಾಯಿತು. ಒಬ್ಬ ಹಿರಿಯ ಮಹಿಳೆಯೂ ಫಹಾದ್ ನಟನೆಯನ್ನು ಆರಾಧಿಸುತ್ತಾರೆ ಎಂದರೆ ಅವರ ಜನಪ್ರಿಯತೆಯ ವ್ಯಾಪ್ತಿ ಎಷ್ಟಿರಬಹುದು ಎಂಬುದು ನನಗೆ ಆ ಕ್ಷಣದಲ್ಲೇ ಅರ್ಥವಾಯಿತು” ಎಂದು ಬಣ್ಣಿಸಿದರು.

ಫಹಾದ್ ಫಾಸಿಲ್ ಅವರ ಕ್ರೇಜ್ ಕೇವಲ ಒಂದು ನಿರ್ದಿಷ್ಟ ವರ್ಗದ ಪ್ರೇಕ್ಷಕರಿಗೆ ಸೀಮಿತವಾಗಿಲ್ಲ, ಬದಲಿಗೆ ಸಾಮಾನ್ಯ ಜನಮಾನಸದಲ್ಲೂ ಆಳವಾಗಿ ಬೇರೂರಿದೆ ಎಂದ ರಾಜಮೌಳಿ, ತಮ್ಮದೇ ತಮಾಷೆಯ ಶೈಲಿಯಲ್ಲಿ, “ಫಹಾದ್ ಅವರ ಜನಪ್ರಿಯತೆ ಇಂದು ತೆಲುಗು ನಾಡಿನಾದ್ಯಂತ ಕೊರೊನಾ ವೈರಸ್‌ಗಿಂತಲೂ ತೀವ್ರವಾಗಿ ಹರಡಿದೆ!” ಎಂದು ಹೊಗಳಿದರು.

ಫಹಾದ್ ಫಾಸಿಲ್ ನಾಯಕನಾಗಿ ನಟಿಸಿರುವ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ರಾಜಮೌಳಿ ಅವರ ಈ ಪ್ರಶಂಸೆಯ ನುಡಿಗಳು ಚಿತ್ರದ ಮೇಲಿರುವ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿವೆ.

Must Read