Sunday, June 4, 2023

Latest Posts

ಸಿಗದ ಬಿಜೆಪಿ ಟಿಕೆಟ್: MLC ಸ್ಥಾನಕ್ಕೆ ಆರ್‌ ಶಂಕರ್‌ ರಾಜೀನಾಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ (Karnataka Elections) ಹಾಲಿ ಶಾಸಕ ಅರುಣ್‌ ಕುಮಾರ್‌ ಪೂಜಾರ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ ಬೆನ್ನಲ್ಲೇ ಬಂಡಾಯದ ಕೂಗು ಶುರುವಾಗಿದ್ದು, ಟಿಕೆಟ್‌ ಆಕಾಂಕ್ಷಿಯಾಗಿದ್ದ ಮೇಲ್ಮನೆ ಸದಸ್ಯ ಆರ್‌. ಶಂಕರ್‌ (MLC R Shankar) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನೊಂದು ಕಡೆ ಮತ್ತೊಬ್ಬ ಟಿಕೆಟ್‌ ಅಕಾಂಕ್ಷಿ, ಬಿ.ಎಸ್.‌ ಯಡಿಯೂರಪ್ಪ ಅವರ ಅತ್ಯಾಪ್ತ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಸಂತೋಷ ಕುಮಾರ್ ಪಾಟೀಲ ಬಿಜೆಪಿಗೆ ಗುಡ್ ಬೈ ಹೇಳಿದ್ದು, ಪಕ್ಷೇತರನಾಗಿ ಕಣಕ್ಕಿಳಿಯಲಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಆರ್‌. ಶಂಕರ್‌ ಅವರು ತಮ್ಮ ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 2018ರ ಚುನಾವಣೆಯಲ್ಲಿ ಪಕ್ಷೇತರನಾಗಿ ಗೆದ್ದಿದ್ದ ಅವರು 2019ರಲ್ಲಿ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದ್ದರು. ಆರ್‌. ಶಂಕರ್‌ ಅವರು ತೆರವುಗೊಳಿಸಿದ ಕ್ಷೇತ್ರಕ್ಕೆ ಮರುಚುನಾವಣೆ ನಡೆದ ಸಂದರ್ಭದಲ್ಲಿ ಬಿಜೆಪಿ ನಾಯಕರು ಆರ್‌ ಶಂಕರ್‌ಗೆ ಎಂಎಲ್‌ಸಿ ಹುದ್ದೆ ನೀಡಿ ಸ್ಪರ್ಧೆಯಿಂದ ಹೊರಗುಳಿಸಿದ್ದರು. ಅರುಣ್‌ ಕುಮಾರ್‌ ಪೂಜಾರ ಅವರಿಗೆ ಟಿಕೆಟ್‌ ನೀಡಿದ್ದು ಅವರು ಗೆದ್ದಿದ್ದರು. ಈ ಬಾರಿ ತನಗೆ ಟಿಕೆಟ್‌ ಬೇಕು ಎಂದು ಆರ್‌ ಶಂಕರ್‌ ಅವರು ಮನವಿ ಮಾಡಿದ್ದರು. ಆದರೆ ಪಕ್ಷ ಮತ್ತೆ ಅರುಣ್‌ ಕುಮಾರ್‌ ಪೂಜಾರ್‌ ಅವರಿಗೇ ಟಿಕೆಟ್‌ ನೀಡಿದೆ.
ಇದರಿಂದ ಬೇಸರಗೊಂಡ ಆರ್‌ ಶಂಕರ್‌ ಅವರು, ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಂದಿನ ನಡೆ ಬಗ್ಗೆ ಒಂದೆರಡು ದಿನದಲ್ಲಿ ತೀರ್ಮಾನ ಮಾಡುತ್ತೇನೆ. ಪಕ್ಷೇತರನಾಗಿ ಕಣಕ್ಕಿಳಿಯುವ ಚಿಂತನೆ ಇದೆ ಎಂದು ಹೇಳಿದರು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!