ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಎರಡು ಬಾಂಬ್ ಬೆದರಿಕೆಗಳನ್ನು ಕಳುಹಿಸಿದ 25 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಶನಿವಾರ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ದೆಹಲಿಯ ಉತ್ತಮ್ ನಗರದಲ್ಲಿರುವ ರಾಜಪುರಿ ಪ್ರದೇಶದಿಂದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ದೂರದರ್ಶನದಲ್ಲಿ ಇದೇ ರೀತಿಯ ಸುದ್ದಿ ವರದಿಗಳನ್ನು ನೋಡಿದ ನಂತರ ತಾನು ಈ ಕೃತ್ಯವನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಶುಭಂ ಉಪಾಧ್ಯಾಯ (25) ಎಂದು ಗುರುತಿಸಲಾಗಿದ್ದು, ಆತ ನಿರುದ್ಯೋಗಿಯಾಗಿದ್ದು, 12ನೇ ತರಗತಿ ತೇರ್ಗಡೆಯಾಗಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಐಜಿಐ ವಿಮಾನ ನಿಲ್ದಾಣ) ಉಷಾ ರಂಗ್ನಾನಿ ತಿಳಿಸಿದ್ದಾರೆ.
‘ಅಕ್ಟೋಬರ್ 25 ಮತ್ತು 26 ರ ಮಧ್ಯರಾತ್ರಿಯಲ್ಲಿ ಐಜಿಐ ವಿಮಾನ ನಿಲ್ದಾಣದಲ್ಲಿ ಎರಡು ಅನುಮಾನಾಸ್ಪದ ಮತ್ತು ಸಂಭಾವ್ಯ ಬಾಂಬ್ ಬೆದರಿಕೆ ಸಂದೇಶಗಳನ್ನ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಸ್ವೀಕರಿಸಲಾಗಿದೆ ಎಂದು ಡಿಸಿಪಿ ರಂಗ್ನಾನಿ ಹೇಳಿದರು.
ತಕ್ಷಣ ಭದ್ರತಾ ಪ್ರೋಟೋಕಾಲ್ ಗಳನ್ನು ಅನುಸರಿಸಲಾಯಿತು. ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ. ತನಿಖೆಯ ಸಮಯದಲ್ಲಿ, ಬೆದರಿಕೆ ಹುಸಿ ಎಂದು ಕಂಡುಬಂದಿದೆ ಎಂದು ಡಿಸಿಪಿ ಹೇಳಿದರು.