ಹೊಸದಿಗಂತ ವರದಿ ಚಿತ್ರದುರ್ಗ
ಜಿಲ್ಲೆಯ ಆಯ್ದ ಶಾಲೆ ಹಾಗೂ ವಿದ್ಯಾರ್ಥಿನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಸರಬರಾಜು ಕಂಡುಬಂದಿದ್ದು, ಸರಬರಾಜುದಾರರು ಹಾಗೂ ಗುಣಮಟ್ಟ ಪರಿಶೀಲನೆ ಮಾಡುವ ತೃತೀಯ ಕಂಪನಿಗಳಿಗೆ ನೋಟಿಸ್ ನೀಡಿ, ಪರಿಶೀಲನಾ ವರದಿ ಸಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನ ಗುತ್ತಿ ನಾಡು, ಮಲ್ಲಾಪುರ ಶಾಲೆಯಲ್ಲಿ ಕಳಪೆ ಬೇಳೆಕಾಳು ಸರಬರಾಜು ಕಂಡು ಬಂದಿದೆ. ಶಾಲೆಯ ದಾಖಲೆಗಳ ನಿರ್ವಹಣೆಯು ಸರಿಯಾಗಿಲ್ಲ. ರಿಜಿಸ್ಟರಲ್ಲಿ ಒಂದೇ ರೀತಿಯಲ್ಲಿ ಆಹಾರ ಪದಾರ್ಥಗಳ ಖರ್ಚು ನಮೂದಿಸಲಾಗಿದೆ. ಎಷ್ಟು ವರ್ಷದಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತೀದ್ದೀರಿ? ಕಳಪೆ ಗುಣಮಟ್ಟದ ಆಹಾರ ಧಾನ್ಯ ಪತ್ತೆಯಾದ ಸಂದರ್ಭದಲ್ಲಿ ಸರಬರಾಜುದಾರು ಮೇಲೆ ಏನು ಕ್ರಮ ಕೈಗೊಂಡಿದ್ದಾರೀ? ಎಂದು ಜಿಲ್ಲಾ ಅಕ್ಷರದಾಸೋಹ ಅಧಿಕಾರಿಗೆ ಖಾರವಾಗಿ ಪ್ರಶ್ನಿಸಿದರು.
ಕೆ.ಎಂ.ಎಫ್. ನಿಂದ ಹಾಲಿನ ಪುಡಿ ಖರೀದಿಸಲು ಒಂದು ವರ್ಷದಲ್ಲಿ ಎಷ್ಟು ಇಂಡೆಟ್ ಕೋಟ್ ಮಾಡಿದ್ದೀರಿ, ಎಷ್ಟು ಹಾಲಿನ ಪುಡಿ ಖರೀದಿಸಿದ್ದೀರಿ ಎಂಬ ವಿವರ ನೀಡುವಂತೆ ತಾಕೀತು ಮಾಡಿದರು.
ಅವಧಿ ಮುಗಿದ ಆಹಾರ ಪದಾರ್ಥಗಳ ಬಳಕೆ : ವಿದ್ಯಾರ್ಥಿನಿಯಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಅವಧಿ ಮುಗಿದ ಆಹಾರ ಪದಾರ್ಥಗಳ ಮಾದರಿಗಳನ್ನು ಸಭೆಯಲ್ಲಿ ಅಧಿಕಾರಿಗಳ ಮುಂದಿಡಿದು ತೋರಿಸಿದ ಆಯೋಗದ ಅಧ್ಯಕ್ಷ ಸಂತೋಷ್ ಕುಮಾರ್ ಅಸಮಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ, ಅಲ್ಪಸಂಖ್ಯಾರ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಈ ರೀತಿಯ ಘಟನೆ ಕಂಡುಬಂದಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೆ, ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ಗುಣಮಟ್ಟದ ಬೆಲೆ ಸರಬಾರಜು ಮಾಡದ ಸರಬರಾಜುದಾರರು ಹಾಗೂ ತೃತೀಯ ಗುಣಮಟ್ಟ ಪರಿಶೀಲನೆ ಮಾಡುವ ಕಂಪನಿಗಳಿಗೆ ನೋಟಿಸ್ ನೀಡಿ, ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.
ತಾಯಿ-ಮಗು ವಾರ್ಡ್‌ನಲ್ಲಿ ಸ್ವಚ್ಛತೆ ಕೊರತೆ : ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಗುವಿನ ವಾರ್ಡ್‌ನಲ್ಲಿ ಸೂಕ್ತ ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿರುವುದಕ್ಕೆ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ತಾಯಿ ಹಾಗೂ ಮಗುವಿಗೆ ಆಸ್ಪತ್ರೆಯಲ್ಲಿ ಮುಕ್ತ ಹಾಗೂ ನೈರ್ಮಲ್ಯಯುತ ವಾತಾವರಣ ಸಿಗಬೇಕು. ಈ ನಿರ್ಲಕ್ಷ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ನೀಡುವಂತೆ ಆಯೋಗ ನಿರ್ದೇಶಿಸಿತು.
ಇದನ್ನೂ ಓದಿ;
ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಅಗತ್ಯವಿರುವ ಔಷಧಗಳ ಕೊರತೆಯಾಗಬಾರದು. ಸ್ಥಳೀಯವಾಗಿ ಔಷಧಗಳನ್ನು ಖರೀದಿ ಮಾಡುವಾಗ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜಿಲ್ಲೆಯಲ್ಲಿ ಗುರುತಿಸಲಾಗಿರುವ ೨೯೨ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪೈಕಿ ಪೌಷ್ಟಿಕ ಪುನಶ್ಚೇತನ ಕೇಂದ್ರಗಳಿಗೆ ಕೇವಲ ೧೪೨ ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಉಳಿದ ಮಕ್ಕಳನ್ನು ದಾಖಲಿಸಿ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಸತ್ಯನಾರಾಯಣ ಶೆಟ್ಟಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ಸುನಿಲ್ ಕುಮಾರ್ , ಆರ‍್ಸಿಹೆಚ್ ಅಧಿಕಾರಿ ಅಭಿನವ್, ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ದಿವಾಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.



