September 24, 2026
Thursday, September 24, 2026
spot_img

‘ಬಿಗ್ ಬಾಸ್ 20’ನಲ್ಲಿ ಸಲ್ಮಾನ್ ಶರ್ಟ್‌ಲೆಸ್ ಅವತಾರ: ದಾಖಲೆಯ ವೀಕ್ಷಣೆ ಗಳಿಸಿ ಹೊಸ ಇತಿಹಾಸ ಬರೆದ ಶೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್’ ಅಂದರೆ ಅಲ್ಲಿ ಡ್ರಾಮಾ, ಮನರಂಜನೆ ಮತ್ತು ಹೈ-ವೋಲ್ಟೇಜ್ ಹಂಗಾಮಾಗೆ ಕೊರತೆಯೇ ಇರುವುದಿಲ್ಲ. ಇದೀಗ ‘ಬಿಗ್ ಬಾಸ್ ಸೀಸನ್ 20’ ಅತ್ಯಂತ ಗ್ರ್ಯಾಂಡ್ ಆಗಿ ಶುರುವಾಗಿದ್ದು, ಪ್ರಸಾರವಾದ ಕೆಲವೇ ದಿನಗಳಲ್ಲಿ ಭಾರತೀಯ ಕಿರುತೆರೆಯ ಸಾರ್ವಕಾಲಿಕ ದಾಖಲೆಗಳನ್ನೆಲ್ಲ ಉಡೀಸ್ ಮಾಡಿದೆ. ಮನರಂಜನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಈ ಸೀಸನ್, ಇತ್ತೀಚಿನ ದಿನಗಳ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿ ಹೊರಹೊಮ್ಮಿದೆ.

ಇತ್ತೀಚಿನ ವರದಿಗಳ ಪ್ರಕಾರ, ‘ಬಿಗ್ ಬಾಸ್ 20’ರ ಇತ್ತೀಚಿನ ಸಂಚಿಕೆಯು 2.1 ಕೋಟಿ ವೀಕ್ಷಣೆಗಳನ್ನು ಪಡೆದುಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಸಾಮಾನ್ಯವಾಗಿ ಲೈವ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಮಾತ್ರ ಸಿಗುತ್ತಿದ್ದ ಈ ಮಟ್ಟದ ವೀಕ್ಷಕರ ಸಂಖ್ಯೆಯನ್ನು, ಮನರಂಜನಾ ಕಾರ್ಯಕ್ರಮವೊಂದು ಪಡೆದುಕೊಂಡಿರುವುದು ಪ್ರತಿಯೊಬ್ಬರ ಹುಬ್ಬೇರಿಸಿದೆ. ಇದು ಭಾರತೀಯ ಕಿರುತೆರೆಯಲ್ಲಿ ಸಲ್ಮಾನ್ ಖಾನ್ ಅವರಿಗಿರುವ ಅಪಾರ ಜನಪ್ರಿಯತೆಗೆ ಜೀವಂತ ಸಾಕ್ಷಿಯಾಗಿದೆ.

ಈ ಬಾರಿಯ ಶೋನಲ್ಲಿ ವೀಕ್ಷಕರನ್ನು ಅತ್ಯಂತ ಹೆಚ್ಚು ಆಕರ್ಷಿಸಿದ್ದು ಸಲ್ಮಾನ್ ಖಾನ್ ಅವರ ರೌದ್ರಾವತಾರ. ತಮಗೆ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರಿದಂತೆ ಇತರ ತಾರೆಯರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟ್ರೋಲ್ ಮಾಡುತ್ತಿದ್ದವರಿಗೆ ಸಲ್ಮಾನ್ ಖಾನ್ ನೇರವಾಗಿಯೇ ಸವಾಲು ಹಾಕಿದ್ದಾರೆ. ಪ್ರಸಾರದ ವೇಳೆ ವೇದಿಕೆಯಲ್ಲೇ ಶರ್ಟ್ ಬಿಚ್ಚಿ, ತಮ್ಮದೇ ಶೈಲಿಯಲ್ಲಿ ಟ್ರೋಲಿಗರಿಗೆ ತರಾಟೆ ತೆಗೆದುಕೊಂಡು ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಲ್ಮಾನ್ ಅವರ ಈ ಮಾಸ್ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದ್ದು, ಶೋನ ಟಿಆರ್‌ಪಿಯನ್ನು ಏರಿಸಿದೆ.

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಯಶಸ್ವಿಯಾಗಿ ಬಿಗ್ ಬಾಸ್ ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್, ಭಾರತೀಯ ಕಿರುತೆರೆಯಲ್ಲೇ ಅತ್ಯಂತ ದುಬಾರಿ ನಿರೂಪಕ ಎನಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಈ ‘ಬಿಗ್ ಬಾಸ್ 20’ ಸೀಸನ್‌ಗಾಗಿ ಸಲ್ಮಾನ್ ಖಾನ್ ಅವರು ಬರೋಬ್ಬರಿ 120 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಆರಂಭದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಓಪನಿಂಗ್ ಪಡೆಯುವ ಮೂಲಕ ‘ಬಿಗ್ ಬಾಸ್’ ಶೋ ಭಾರತದ ನಂಬರ್ ಒನ್ ಎಂಟರ್‌ಟೇನ್‌ಮೆಂಟ್ ಬ್ರಾಂಡ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮೊದಲ ಕೆಲವು ದಿನಗಳಲ್ಲೇ ಈ ಮಟ್ಟದ ಹೈಪ್ ಸೃಷ್ಟಿಯಾಗಿರುವುದರಿಂದ, ಮುಂಬರುವ ದಿನಗಳಲ್ಲಿ ‘ಬಿಗ್ ಬಾಸ್ 20’ ಇನ್ಯಾವ ಮಟ್ಟದ ರೋಚಕ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Must Read