ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ: ಕೇರಳದ ನಾಲ್ವರ ಸಹಿತ 12 ಮಂದಿ ಬಂಧನ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಮುತ್ತೂಟ್ ಫಿನ್ ಕಾರ್ಪ್,ಭಾಗಮಂಡಲ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ನಾಲ್ವರು ಸೇರಿದಂತೆ ಒಟ್ಟು 12ಮಂದಿಯನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕೊಡಗು ಜಿಲ್ಲೆಯ ಕುಂಜಿಲ ಗ್ರಾಮದ ಮೊಹಮ್ಮದ್ ರಿಜ್ವಾನ್.ಕೆ.ಎ, (35), ಅಬ್ದುಲ್ ನಾಸಿರ್ (50), ಎಮ್ಮೆಮಾಡು ಪಡಿಯಾನಿಯ ರಿಯಾಜ್ ಪಿ.ಹೆಚ್., (39), ಮೂಸಾ.ಬಿ.ಎ. (37), ಮಹಮ್ಮದ್ ಹನೀಫ್‌.ಎಂ.ಎಂ. (42), ಖತೀಜಾ (32), ಅಯ್ಯಂಗೇರಿಯ ರಫೀಕ್ (38, ಫಾರಾನ್(33), ಕೇರಳದ ಮಲಪುರಂನ ನವಾಸ್.ಕೆ.ಪಿ( 47) ಎರ್ನಾಕುಲಂನ ನಿಶಾದ್.ಕೆ.ಎ, (43) ಮಹಮ್ಮದ್ ಕುಂಞಿ.ಸಿ.ಎಂ. (48), ಪ್ರದೀಪ್.ಪಿಜೆ(60) ಎಂದು ಗುರುತಿಸಲಾಗಿದೆ.

ಆರೋಪಿಗಳು ಒಟ್ಟು 625ಗ್ರಾಂ ನಕಲಿ ಚಿನ್ನಾಭರಣಗಳನ್ನು ಅಡಮಾನ ಮಾಡಿ ವಿವಿಧ ಹಣಕಾಸು ಸಂಸ್ಥೆಗಳಿಂದ 34,95,016 ರೂ.ಗಳ ಸಾಲ ಪಡೆದಿರುವುದಾಗಿ ಹೇಳಲಾಗಿದ್ದು, ಆರೋಪಿಗಳಿಂದ‌ ಇದುವರೆಗೆ 223 ಗ್ರಾಂ ತೂಕದ ಚಿನ್ನ ಲೇಪಿತ 28 ಬಳೆಗಳು, 2ಲಕ್ಷ ರೂ.ನಗದು,2,08,221 ರೂ.ಗಳ ಬ್ಯಾಂಕ್ ಖಾತೆ ಫ್ರೀಜ್ ಮೊತ್ತ, 1,26,504ರೂ.ವಿಮೆ ಮೇಲಿನ ಹೂಡಿಕೆ, 1.40ಲಕ್ಷ ರೂ.ಗಳ ಐಫೋನ್‌ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.

   

ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ‌ ಅವರು,ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ನ ಮುಖ್ಯ ಶಾಖೆಯಲ್ಲಿ ಡಿ.4ರಂದು ಮೊಹಮ್ಮದ್ ರಿಜ್ವಾನ್.ಕೆ.ಎ ಎಂಬಾತ 8 ಚಿನ್ನದ ಬಳೆಗಳನ್ನು ಅಡಮಾನ ಮಾಡಿ ಸಾಲ ಪಡೆದುಕೊಳ್ಳಲೆಂದು ಬಂದ ಸಂದರ್ಭ ಆಭರಣವನ್ನು ಪರಿಶೀಲಿಸಿದಾಗ ನಕಲಿ ಆಭರಣ ಎಂಬುದು ಪತ್ತೆಯಾಗುತ್ತದೆ.

ಅದೇ ರೀತಿ ಎಮ್ಮೆಮಾಡು ನಿವಾಸಿಗಳಾದ ರಿಯಾಜ್, ಖತೀಜಾ ಮತ್ತು ಮಹಮ್ಮದ್‌ ಹನೀಫ್, ಕುಂಜಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ನಾಸೀರ್, ಮೂಸಾ ಮತ್ತು ಹಂಸ ಎಂಬುವರುಗಳು ಮಡಿಕೇರಿ, ಭಾಗಮಂಡಲ, ವೀರಾಜಪೇಟೆ, ಕಡಂಗ ಕೆಡಿಸಿಸಿ ಬ್ಯಾಂಕ್, ಮಡಿಕೇರಿಯ ಮುತ್ತೂಟ್ ಫಿನ್ ಕಾರ್ಪ್ ಹಾಗೂ ಭಾಗಮಂಡಲದ ವಿಎಸ್‌ಎಸ್‌ಎನ್ ಬ್ಯಾಂಕ್‌ಗಳಲ್ಲಿ ಅಡಮಾನ ಮಾಡಿರುವ ಒಟ್ಟು 625 ಗ್ರಾಂ ತೂಕದ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ, ಅವುಗಳು ಕೂಡಾ ನಕಲಿ ಚಿನ್ನಾಭರಣಗಳೆಂದು ಗೋಚರಿಸಿದೆ.

ಈ ಆರೋಪಿಗಳು ಒಟ್ಟು 34,95,016 ರೂ.ಗಳ ಸಾಲವಾಗಿ ಪಡೆದಿದ್ದು, ಈ ಸಂಬಂಧ ಮಡಿಕೇರಿ ನಗರ, ವೀರಾಜಪೇಟೆ ನಗರ, ಭಾಗಮಂಡಲ ಮತ್ತು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್, ಸೆನ್ ಪೊಲೀಸ್ ಠಾಣೆಯ ಡಿಎಸ್ಪಿ ರವಿ, ಮಡಿಕೇರಿ ನಗರ ವೃತ್ತದ ಸಿಪಿಐ ರಾಜು.ಪಿ.ಕೆ., ಮಡಿಕೇರಿ ಗ್ರಾಮಾಂತರ ವೃತ್ತದ ಸಿಪಿಐ ಅನೂಪ್ ಮಾದಪ್ಪ.ಪಿ, ಡಿಸಿಆರ್ ಬಿ ಇನ್ಸ್ಪೆಕ್ಟರ್ ಮೇದಪ್ಪ, ಪಿಐ, ಮಡಿಕೇರಿ ನಗರ ಠಾಣೆಯ ಪಿಎಸ್ಐ ಲೊಕೇಶ್, ಭಾಗಮಂಡಲ ಠಾಣೆಯ ಪಿಎಸ್ಐ ಶೋಭಾ ಲಮಾಣಿ, ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಆರ್‌ಬಿ ಮತ್ತು ತಾಂತ್ರಿಕ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.

ಪ್ರಕರಣದ ವಿಚಾರಣೆ ಸಂದರ್ಭ ಕೇರಳ ರಾಜ್ಯ ಮಲಪುರಂ ಜಿಲ್ಲೆ ನಿವಾಸಿ ನವಾಜ್ ಎಂಬಾತ ನಕಲಿ ಚಿನ್ನವನ್ನು ನೀಡಿರುವುದು ಕಂಡುಬಂದಿದ್ದು, ಮುಂದುವರಿದ ತನಿಖೆ ಸಂದರ್ಭ ಈ ಕೃತ್ಯದ ಮಾಸ್ಟರ್ ಮೈಂಡ್ ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ಅಕ್ಕಸಾಲಿಗ ವೃತ್ತಿಯ ಮೊಹಮ್ಮದ್ ಕುಂಞಿ ಎಂಬುದು ಬೆಳಕಿಗೆ ಬಂದಿದೆ.
ಈತ ಪ್ರದೀಪ್ ಎಂಬಾತನಿಗೆ ಹಣ ನೀಡಿ ನಕಲಿ ಚಿನ್ನ ಲೇಪಿತ ಆಭರಣಗಳನ್ನು ತಯಾರಿಸಿದ್ದು, ಮಾಸ್ಟರ್ ಮೈಂಡ್ ಮೊಹಮ್ಮದ್ ಕುಂಞಿಯಿಂದ ಮಧ್ಯವರ್ತಿಯಾದ ನಿಶಾದ್ ಎಂಬಾತ ನಕಲಿ ಚಿನ್ನವನ್ನು ಪಡೆದು ನವಾಜ್ ಎಂಬಾತನಿಗೆ ನೀಡಿರುವುದು ಬೆಳಕಿಗೆ ಬಂದಿದೆ. ಪ್ರದೀಪ್ ಮೇಲೆ 2024ನೇ ಸಾಲಿನಲ್ಲಿ 3 ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣಗಳು ದಾಖಲಾಗಿದ್ದು, ನಿಶಾದ್ ಮೇಲೆ ದರೋಡೆ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣಗಳು ದಾಖಲಾಗಿದೆ.ಈ ಪ್ರಕರಣದ ಆರೋಪಿಗಳು ವಿಚಾರಣಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಂಡು ವಿಚಾರಣೆ ಮುಗಿಯುವ ವೇಳೆ ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಇದೇ ರೀತಿಯ ಕೃತ್ಯದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ ಎಂದು ಕೆ.ರಾಮರಾಜನ್ ವಿವರಿಸಿದರು.

ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆಯ ಕಲಂ: III ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಆರೋಪಿಗಳಿಗೆ ಕಲಂ 111 ಬಿಎನ್ಎಎಸ್ ಆಕ್ಟ್ ಅಡಿಯಲ್ಲಿ ಕನಿಷ್ಟ 5 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಟ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಇಂತಹ ಕೃತ್ಯ ನಡೆಸಿದ ಆರೋಪಿಗಳಿಗೆ ಜಾಮೀನು ನೀಡದಂತೆ ಘನ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದೂ ಅವರು ನುಡಿದರು.

ಮಡಿಕೇರಿ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 10ಹಾಗೂ ಭಾಗಮಂಡಲ ಠಾಣೆಯಲ್ಲಿ ದಾಖಲಾದ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಹಂಸ ಎಂಬಾತನನ್ನು ಇನ್ನಷ್ಟೇ ಬಂಧಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!