ಹೊಸದಿಗಂತ ವರದಿ,ಅಂಕೋಲಾ:
ನಿವೃತ್ತ ಶಿಕ್ಷಕ, ಸಾಮಾಜಿಕ ಕಾರ್ಯಕರ್ತ ಪಟ್ಟಣದ ಅಜ್ಜಿಕಟ್ಟಾ ನಿವಾಸಿ ಪ್ರಕಾಶ ಕುಂಜಿ(70) ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು.
ತಾಲೂಕಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು ಪಿ.ಎಂ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ತಮ್ಮ ನಿವೃತ್ತಿಯ ನಂತರವೂ ಹಲವು ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷಣ ಮತ್ತು ಆಟೋಟಗಳ ತರಬೇತಿ ನೀಡುವ ಮೂಲಕ ಗುರುತಿಸಿಕೊಂಡಿದ್ದರು.
ಜಿಲ್ಲೆಯಲ್ಲಿ ನಡೆಯುವ ನೂರಾರು ಕ್ರೀಡಾಕೂಟಗಳ ವಿವಿಧ ಸ್ಪರ್ಧೆಗಳಲ್ಲಿ ನಿರ್ಣಾಯಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ.
ಕ್ರಿಯಾಶೀಲ ವ್ಯಕ್ತಿತ್ವದವರಾಗಿದ್ದ ಅವರು ತಾಲೂಕಿನಲ್ಲಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ,ಸಾಹಿತ್ಯಿಕ ಉತ್ಸವಗಳಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು.
ತಾಲೂಕಿನ ಬಂಡಿಬಜಾರ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಪದಾಧಿಕಾರಿ, ಸದಸ್ಯರಾಗಿ,ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ, ಕನ್ನಡ ಸಾಹಿತ್ಯ ಪರಿಷತ್ತು, ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ ದಲ್ಲಿ ಸೇವೆ ಸಲ್ಲಿಸಿದ್ದಾರೆ.ಪ್ರಸ್ತುತ ಅಂಕೋಲೆಯ ಕರ್ನಾಟಕ ಸಂಘದ ಸಹ ಕಾರ್ಯದರ್ಶಿ ಆಗಿದ್ದರು.
ಮೃತರ ಪತ್ನಿ ತೀರಿಕೊಂಡಿದ್ದು ಪುತ್ರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸತೀಶ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ್ , ಕರ್ನಾಟಕ ಸಂಘ, ಅಂಕೋಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತಿತರ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ.