- ಕಿರಣ ಮಾಸಣಗಿ
ಹಾವೇರಿ: ಕೃಷಿಕರ ಜೀವನಾಡಿ ಎನಿಸಿರುವ ಜಾನುವಾರುಗಳು ಇತ್ತೀಚೆಗೆ ವಿಶ್ವವನ್ನೇ ಕಾಡಿದ ‘ಚರ್ಮಗಂಟು ರೋಗ’ದ ಬೆನ್ನಲ್ಲೇ ಇದೀಗ ಜಿಲ್ಲೆಯಾದ್ಯಂತ 4ನೇ ಹಂತದ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ 6 ತಿಂಗಳಿಗೊಮ್ಮೆ ಜಾನುವಾರು ಸಂರಕ್ಷಿಸುವ ಹಿನ್ನೆಲೆಯಲ್ಲಿ ಉಚಿತ ಲಸಿಕೆ ಹಾಕಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿನ ಜಾನುವಾರುಗಳ ಸಂಖ್ಯೆ ತೀವ್ರಗತಿಯಲ್ಲಿ ಕುಸಿತ ಕಂಡು ಬಂದಿರುವುದು ಅನ್ನದಾತರಲ್ಲಿ ಆತಂಕ ಹುಟ್ಟಿಸಿದೆ.
ಜಾನುವಾರು ಗಣತಿ:
ಕೇಂದ್ರ ಪಶು ಪಾಲನಾ ಇಲಾಖೆಯಿಂದ ಪ್ರತಿ 5 ವರ್ಷಕ್ಕೊಮ್ಮೆ ದೇಶಾದ್ಯಂತ ಜಾನುವಾರುಗಳ ಗಣತಿ ನಡೆಯುತ್ತದೆ. 2019ರಲ್ಲಿ ಜಾನುವಾರು ಗಣತಿ ನಡೆದಿದ್ದು, ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 3,46,561 ಜಾನುವಾರುಗಳಿದ್ದವು.
ಇತ್ತೀಚಿನ ದಿನಗಳಲ್ಲಿ ಕಂಡು ಬಂದು ಕಾಡಿದ ಚರ್ಮಗಂಟು ರೋಗದಿಂದ ಜಿಲ್ಲೆಯ 25,382 ಜಾನುವಾರು ರೋಗಕ್ಕೆ ತುತ್ತಾದವು. ಅದರಲ್ಲಿ ಸುಮಾರು 2,994 ಜಾನುವಾರು ಮೃತಪಟ್ಟಿವೆ. ಇದು ಆಯಾ ರೈತನಿಗೆ ಮಾತ್ರವಲ್ಲದೇ ಇಡೀ ಸಮುದಾಯಕ್ಕೂ ಆದ ನಷ್ಟ ಎಂದು ಭಾವಿಸಬಹುದಾಗಿದೆ.
ಸಂಖ್ಯೆ ಕ್ಷೀಣ
ಪ್ರಸ್ತುತ ಜಿಲ್ಲೆಯಲ್ಲಿ 3,06,982 ಜಾನುವಾರು ಇದ್ದು, ಈಗ ಜಿಲ್ಲೆಯಲ್ಲಿ ಚರ್ಮಗಂಟು ರೋಗದ ಭಯವಿಲ್ಲ. ಅಲ್ಲಲ್ಲಿ ಲಸಿಕೆ ಹಾಕಿಸದ ಕೆಲ ಜಾನುವಾರುಗಳಿಗೆ ರೋಗ ಬಂದರೂ ಪ್ರಾಣಕ್ಕೆ ಅಪಾಯವಿಲ್ಲ. 2019ರ ಗಣತಿ ಹಾಗೂ ಈಗ ಹೋಲಿಸಿದರೆ ಬರೊಬ್ಬರಿ 39,579 ಜಾನುವಾರು ಸಂಖ್ಯೆ ಕ್ಷೀಣಿಸಿದೆ.
ಪ್ರಸ್ತುತ ಅಂಕಿ-ಅಂಶ
ಇದು ದೇಶವ್ಯಾಪಿ ನಡೆಯುತ್ತಿರುವ ಲಸಿಕಾ ಅಭಿಯಾನದಡಿ, 3ನೇ ಹಂತದ ಲಸಿಕೆ ವೇಳೆ ಸಿಕ್ಕ ಅಂಕಿ-ಅಂಶ: ಪ್ರಸ್ತುತ ಜಿಲ್ಲಾದ್ಯಂತ 4ನೇ ಹಂತದ ಲಸಿಕಾ ಅಭಿಯಾನ ಚಾಲ್ತಿಯಲ್ಲಿದ್ದು, ಈ ವಾರದ ಅಂತ್ಯಕ್ಕೆ ಲಸಿಕಾ ಅಭಿಯಾನ ಪೂರ್ಣಗೊಳ್ಳಲಿದೆ.
ಬ್ಯಾಡಗಿ -32,639, ಹಾನಗಲ್ಲ -50,456, ಹಾವೇರಿ-49,492, ಹಿರೇಕೆರೂರ -25,675, ರಾಣೆಬೆನ್ನೂರ-56,098, ರಟ್ಟಿಹಳ್ಳಿ -23,488, ಸವಣೂರ -28,842 ಮತ್ತು ಶಿಗ್ಗಾಂವ -40,792 ಜಾನುವಾರುಗಳಿದ್ದು, ಇವು ಬಹುತೇಕ ಕೃಷಿ ಮತ್ತು ಕೃಷಿ ಆಧಾರಿತ ಹೈನುಗಾರಿಕೆ, ಎರೆಹುಳು ಸಾಕಾಣಿಕೆ ಸೇರಿದಂತೆ ಹಲವು ಉಪ ಕೃಷಿ ಉದ್ಯೋಗ ಸೃಷ್ಠಿಗೆ ಕಾರಣವಾಗಿವೆ.
ಆದಾಗ್ಯೂ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಜಾನುವಾರು ಸಂಖ್ಯೆ ಹೆಚ್ಚಿದರೆ, ಜಿಲ್ಲೆಯಲ್ಲಿ ಆಘಾತಕಾರಿ ರೀತಿಯಲ್ಲಿ ಕುಸಿತಗೊಂಡಿರುವುದು ಹೊಸ ಸವಾಲನ್ನು ಸೃಷ್ಟಿಸಿದೆ.
ಪ್ರಸ್ತುತ ಸನ್ನಿವೇಶವನ್ನು ಸರ್ಕಾರ ಈಗಲೇ ಗಂಭೀರವಾಗಿ ಪರಿಗಣಿಸಿದಲ್ಲಿ ಮುಂದಿನ 10 ವರ್ಷಗಳ ಭವಿಷ್ಯವನ್ನು ಈಗಲೇ ನಿರ್ಧರಿಸಬಹುದಾಗಿದೆ ಎಂಬುದು ಕೆಲ ತಜ್ಞರ ಅಭಿಪ್ರಾಯ.
ಒಟ್ಟಿನಲ್ಲಿ ಹೈನುಗಾರಿಕೆ ಮತ್ತು ಕೃಷಿ ಉತ್ಪನ್ನ ಸಹಾಯಕ ಉದ್ಯಮಗಳಿಗೆ ಜಾನುವಾರುಗಳೇ ಜೀವನಾಡಿಯಾಗಿದ್ದು, ಇವುಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತುರ್ತು ಚಿಂತನೆ ಅಗತ್ಯವಿದೆ.