ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಕುಸಿತದ ದಾರಿ ಹಿಡಿದ ಭಾರತೀಯ ಷೇರುಮಾರುಕಟ್ಟೆ ಇಂದು ಕೂಡ ಭಾರಿ ಕುಸಿತಕ್ಕೆ ಸಾಕ್ಷಿಯಾಗಿದ್ದು, ಹೂಡಿಕೆದಾರರ 10 ಲಕ್ಷ ಕೋಟಿ ರೂ ನಷ್ಟವಾಗಿದೆ.
ಇಂದು ಸೆನ್ಸೆಕ್ಸ್ 662.87 ಅಂಕಗಳನ್ನು ಕಳೆದುಕೊಂಡಿದ್ದು, ದಿನದ ವಹಿವಾಟು ಅಂತ್ಯಕ್ಕೆ 79,402.29 ಅಂಕಗಳಿಗೆ ಕುಸಿತವಾಗಿದೆ.
ನಿಫ್ಟಿ ಕೂಡ 218.60 ಅಂಕಗಳ ಕುಸಿತಕಂಡಿದ್ದು, 24,180.80 ಅಂಕಗಳಿಗೆ ಕುಸಿದಿದೆ. ಇಂದು ಒಂದೇ ದಿನ ಭಾರತೀಯ ಷೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೊಬ್ಬರಿ ಶೇ.0.83ರಷ್ಟು ಕುಸಿದಿದ್ದು, ನಿಫ್ಟಿ ಸೂಚ್ಯಂಕ ಕೂಡ ಶೇ.0.90ರಷ್ಟು ಕುಸಿದಿದೆ.
ಇಂದಿನ ಮಾರುಕಟ್ಟೆ ಕುಸಿತದಿಂದಾಗಿ ಹೂಡಿಕೆದಾರರ 10 ಲಕ್ಷ ಕೋಟಿ ರೂ ನಷ್ಟವಾಗಿದ್ದು, ಬಿಎಸ್ ಇಯಲ್ಲಿ ಪಟ್ಟಿಮಾಡಲಾದ ಸಂಸ್ಥೆಗಳ ಷೇರುಗಳ ಮೌಲ್ಯ 437.76 ಲಕ್ಷ ಕೋಟಿಗೆ ಕುಸಿದಿದೆ.
ಇಂದಿನ ಭಾರಿ ಕುಸಿತಕ್ಕೆ 2ನೇ ತ್ರೈಮಾಸಿಕ ವರದಿಯಲ್ಲಿ ಭಾರತೀಯ ಕಂಪನಿಗಳ ನೀರಸ ಪ್ರದರ್ಶನ ಇಂದು ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.ಅಲ್ಲದೆ ಹೂಡಿಕೆದಾರರು ನಿರಂತರವಾಗಿ ವಿದೇಶಿ ಮಾರುಕಟ್ಟೆ ಮೇಲೆ ಹೂಡಿಕೆ ಮಾಡುತ್ತಿರುವುದು ಇಂದಿನ ನಕಾರಾತ್ಮಕ ವಹಿವಾಟಿಗೆ ಕಾರಣ ಎನ್ನಲಾಗಿದೆ. ಅಂತೆಯೇ ಖಾಸಗಿ ಸಾಲದಾತ ಬ್ಯಾಂಕಿಂಗ್ ಸಂಸ್ಥೆ ಇಂಡಸ್‌ಇಂಡ್ ಬ್ಯಾಂಕ್ ಮತ್ತು ಇಂಧನ ವಲಯದ NTPC ನಿರಾಶಾದಾಯಕ Q2 ಫಲಿತಾಂಶಗಳೂ ಕೂಡ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ ಎನ್ನಲಾಗಿದೆ.
ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಲಾರ್ಸೆನ್ ಮತ್ತು ಟೂಬ್ರೊ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚು ನಷ್ಟ ಅನುಭವಿಸಿದ್ದು, ಒಟ್ಟಾರೆಯಾಗಿ ಸೆನ್ಸೆಕ್ಸ್‌ನಲ್ಲಿ ಇಂದಿನ ಕುಸಿತಕ್ಕೆ 418 ಅಂಕಗಳನ್ನು ನೀಡಿವೆ. ಹೆಚ್ಚುವರಿಯಾಗಿ, NTPC, HDFC ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇನ್ಫೋಸಿಸ್ ಮತ್ತು ಬಜಾಜ್ ಫೈನಾನ್ಸ್ ಕೂಡ ನಷ್ಟವನ್ನು ಅನುಭವಿಸಿವೆ.