ಅಕ್ರಮ ಮರಳು ಸಾಗಣೆ: ಪ್ರಶ್ನೆ ಮಾಡಿದ್ದಕ್ಕೆ ದಂಧೆಕೋರರಿಂದ ರೈತನ ಮೇಲೆ ಹಲ್ಲೆ

ಹೊಸದಿಗಂತ ವರದಿ ರಾಣೇಬೆನ್ನೂರ:

ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ದಂಧೆಕೋರರು ರೈತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ರಾಣೇಬೆನ್ನೂರ ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ತುಂಗಭದ್ರ ನದಿ ಪಾತ್ರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಯುವ ರೈತನನ್ನು ಗ್ರಾಮದ ಗೋಪಾಲಕೃಷ್ಣ ನಾಗಪ್ಪ ಐರಣಿ (33) ಎಂದು ಗುರುತಿಸಲಾಗಿದೆ.

ರಾತ್ರಿಯ ವೇಳೆ ಸುಮಾರು ಹತ್ತಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ತುಂಗಭದ್ರ ನದಿ ಪಾತ್ರದಲ್ಲಿ ಅಕ್ರಮ ಮರಳು ತುಂಬಲು ತೊಡಗಿದ್ದವು. ಮರಳು ತುಂಬಲು ಹಾವೇರಿ ತಾಲೂಕಿನ ಹಾಂವಶಿ, ಹಾವನೂರು ಹಾಗೂ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಒಟ್ಟು 30ಕ್ಕೂ ಅಧಿಕ ಹಮಾಲರು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದರು.

 

ಈ ಸಂದರ್ಭದಲ್ಲಿ ರೈತ ಗೋಪಾಲಕೃಷ್ಣ ಅಕ್ರಮ ಮರಳು ದಂಧೆಕೋರರನ್ನು ತಡೆದು ನೀವು ಪದೆ ಪದೆ ಮರಳು ಗಣಿಗಾರಿಕೆ ನಡೆಸುತ್ತಿರುವುದರಿಂದ ನಮ್ಮ ಪೈಪ್ ಲೈನ್ ಒಡೆದು ಹಾಳಾಗುತ್ತಿವೆ. ದಯವಿಟ್ಟು ಇಲ್ಲಿ ಅಕ್ರಮ ಮರಳನ್ನು ತುಂಬುವುದು ಹಾಗೂ ಸಾಗಾಟ ಮಾಡುವುದನ್ನು ಮಾಡಬೇಡಿ ಎಂದು ಹೇಳುತ್ತಿರುವಾಗಲೇ ದಂಧೆ ಕೋರರು ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದಾರೆ.

ಅಕ್ರಮ ಮರಳು ತುಂಬಲು ಬಂದ ಟ್ರ್ಯಾಕ್ಟರ್ ಗಳಿಗೆ ನಂಬರ್ ಪ್ಲೇಟ್‌ ಇರಲಿಲ್ಲ. ಇಲ್ಲಿ ದಿನನಿತ್ಯ ರಾತ್ರಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಆದರೂ ಗಣಿ ಇಲಾಖೆ ಮತ್ತು ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೌನವಹಿಸಿ ಅಕ್ರಮ ಮರಳು ದಂಧೆಗೆ ಮತ್ತಷ್ಟು ಪುಷ್ಟಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಲ್ಲೆ ಮಾಡಿದ ಅಕ್ರಮ ಮರಳು ದಂಧೆಕೋರರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!