Friday, December 8, 2023

Latest Posts

ಕೈ ಕೊಟ್ಟ ಮಳೆ-ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ‌ ರಕ್ಷಿಸಿಕೊಳ್ಳುತ್ತಿರುವ ರೈತರು

ಹೊಸದಿಗಂತ ವರದಿ ರಾಯಚೂರು:

ಕಳೆದ ಎರಡುವರೆ ತಿಂಗಳಿನಿಂದ ಮಳೆ ಬಾರದ ಹಿನ್ನೆಲೆಯಲ್ಲಿ ಅನೇಕ ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ.‌

ಒಂದುವರೆ ಎಕರೆ ಪ್ರದೇಶದಲ್ಲಿ ಹುಲುಸಾಗಿ ಬೆಳೆದುನಿಂತ ಮೆಣಸಿನ ಬೆಳೆಯು ಹೂವು ಕಾಯಿ ಕಟ್ಟುವ ಸಮಯದಲ್ಲಿ ಮಳೆಯಿಲ್ಲದೆ ಬಾಡಲಾರಂಭಿಸಿತು. ಇದರಿಂದ ಕಂಗೆಟ್ಟ ತಾಲೂಕಿನ ಆಶಾಪುರ ಗ್ರಾಮದ ರಂಗಪ್ಪ ನಾಯಕ್ ಹಾಗೂ ವೀರೇಶ ನಾಯಕ್ ಎನ್ನುವ ಸಹೋದರರು ಸಂವೃದ್ಧವಾಗಿ (ಅಂದಾಜು 4.5 ರಿಂದ 5 ಅಡಿ) ಎತ್ತರ ಬೆಳೆದಿರುವ ಮೆಣಸಿನ ಬೆಳೆಯನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಟ್ರ್ಯಾಕ್ಟರ್‌ ಬಳಸಿ ಟ್ಯಾಂಕರ್ ನಲ್ಲಿ ಬೇರೆಡೆಯಿಂದ ನೀರು ತಂದು ಮೆಣಸಿನ ಬೆಳೆಗೆ ನೀರುಣಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಇದಕ್ಕಾಗಿ ಮೂರು ಟ್ರ್ಯಾಕ್ಟರ್‌ ಹಾಗೂ ಮೂರು ಟ್ಯಾಂಕರುಗಳನ್ನು ಬಾಡಿಗೆ ತಗೆದುಕೊಂಡು ಅದೇ ಗ್ರಾಮದಲ್ಲಿರುವ ಬಾವಿಯೊಂದರಿಂದ ನೀರು ತಂದು ಬೆಳೆಗೆ ನೀರು ಹಾಯಿಸುತ್ತಿದ್ದಾರೆ.

ಪ್ರತಿ ನಿತ್ಯ ಟ್ರ್ಯಾಕ್ಟರ್‌ಗೆ 3200, ಟ್ಯಾಂಕರ್‌ಗೆ 800 ಹಾಗೂ ನೀರಿಗೆ 150 ಹಾಗೂ ಟ್ಯಾಂಕರ್‌ಗಳಿಗೆ ನೀರು ತುಂಬಿಸುವ ಪಂಪ್ ಉಳ್ಳ ಟ್ರ್ಯಾಕ್ಟರ್‌ನ ನಿತ್ಯದ ಬಾಡಿಗೆ 3 ಸಾವಿರ ರೂದಂತೆ ಬಾಡಿಗೆಗೆ ತಂದು ನೀರನ್ನು ಹಾಯಿಸುತ್ತಿದ್ದಾರೆ.

ಒಂದು ಬಾರಿಗೆ ಮೂರು ಟ್ಯಾಂಕರ್ ನೀರು ಬೇಕಾಗುತ್ತದೆ. ಒಂದೇ ಬಾರಿಗೆ ಮೂರು ಟ್ಯಾಂಕರ್ ನೀರನ್ನು ಒಂದೇ ಸಾಲಿನಲ್ಲಿ ಬಿಟ್ಟರೆ ಮಾತ್ರ ಆ ಸಾಲಿನ ಕೊನೆಗೆ ನೀರು ಮುಟ್ಟುತ್ತದೆ. ಒಂದು ಸಾಲಿನಲ್ಲಿ ಎರಡು ಟ್ಯಾಂಕರ್ ನೀರು ಬಿಟ್ಟರೆ ಆ ಸಾಲು ಮುಟ್ಟುವುದಕ್ಕೆ ಮತ್ತೆ ಒಂದುವರೆ ಟ್ಯಾಂಕರ್ ನೀರನ್ನು ಬಿಡಬೇಕಾಗುತ್ತದೆ ಹೀಗಾಗಿ ಒಂದೇ ಬಾರಿ ಮೂರೂ ಟ್ಯಾಂಕರ್‌ನ ನೀರನ್ನು ಒಂದು ಸಾಲಿನಲ್ಲಿ ಬಿಡುತ್ತಿದ್ದಾರೆ.
ಒಂದು ಸಾಲು ಬಿಟ್ಟು ಒಂದು ಸಾಲಿಗೆ ನೀರುಣಿಸುತ್ತಿದ್ದಾರೆ. ಇದರಿಂದ ಕಡಿಮೆ ಖರ್ಚಿನಲ್ಲಿ ಬೆಳೆಯನ್ನು ಉಳಿಸಿಕೊಳ್ಳಲು ಸಧ್ಯವಾಗುತ್ತದೆ ಎನ್ನುವುದು ಈ ರೈತರ ಲೆಕ್ಕಾಚಾರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!